ಮೋದಿ ಅಭಿವೃದ್ಧಿ ಯಾವುದೆಂದು ತಿಳಿಸಿ: ಹರಿಪ್ರಸಾದ್
ಕ.ಪ್ರ.ವಾರ್ತೆ, ಮೂಡಿಗೆರೆ, ಏ.30
ಕರ್ನಾಟಕವನ್ನು ಗುಜರಾತ್ ಆಗಿ ಮಾರ್ಪಾಡು ಮಾಡಲು ಹೊರಟಿರುವ ಬಿಜೆಪಿ ಬಗ್ಗೆ ಮತದಾರರು ಎಚ್ಚರ ವಹಿಸದಿದ್ದರೆ. ಮುಂದೆ ಭಾರಿ ನೋವು ಅನುಭವಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಎಚ್ಚರಿಸಿದರು.
ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಲು ಬಂದ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಗುಜರಾತ್ನಲ್ಲಿ ನರೇಂದ್ರ ಮೋದಿ ಮಾಡಿರುವ ಅಭಿವೃದ್ಧಿ ಯಾವುದೆಂದು ಬಹಿರಂಗವಾಗಿ ತಿಳಿಸಿದಲ್ಲಿ ತಾವು ರಾಜಕೀಯ ಜೀವನದಿಂದಲೇ ನಿವೃತ್ತಿ ತೆಗೆದುಕೊಳ್ಳುವುದಾಗಿ ಶಪಥ ಮಾಡಿದರು.
ನರಮೇಧ: ಗುಜರಾತಿನಲ್ಲಿ ನಡೆಯುತ್ತಿರುವ ನರಮೇಧ, ಅಧಿಕಾರಿಗಳ ಮೇಲೆ ದೌರ್ಜನ್ಯ ಹೀಗೆ ಹೇಳಲು ಸಾಕಷ್ಟಿವೆ. ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬಂದು ವರಮಹಾಲಕ್ಷ್ಮೀ ಹಬ್ಬದ ನೆಪದಲ್ಲಿ. ರೆಡ್ಡಿ ಸಹೋದರರ ತಲೆಯ ಮೇಲೆ ಕೈಯಿಟ್ಟಿದ್ದರ ಫಲ. ಜನಾರ್ದನ ರೆಡ್ಡಿ ಜೈಲುಪಾಲಾಗಿದ್ದು, ಇನ್ನು ಇವರು ಯಾರ ತಲೆಯ ಮೇಲಾದರೂ ಕೈಯಿಟ್ಟರೆ ಜೈಲಿಗೆ ಹೋಗಲು ಸಿದ್ಧರಿರಬೇಕು ಎಚ್ಚರವಾಗಿರಿ ಎಂದರು.
ಮೂಡಿಗೆರೆ ಮೀಸಲು ಕ್ಷೇತ್ರದಿಂದ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರಿಗೆ ಮತ ನೀಡುವುದರ ಮೂಲಕ ಅವರನ್ನು ವಿಧಾನ ಸಭೆಗೆ ಕಳುಹಿಸಿದಲ್ಲಿ. ಉತ್ತಮ ಅಭಿವೃದ್ಧಿ ಸಾಧ್ಯ. ಚಂದ್ರಪ್ಪನವರಿಗೆ ಮತ ನೀಡಿ ಅವರನ್ನು ಗೆಲ್ಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಮಾತನಾಡಿದರು. ಪಕ್ಷದ ಹಿರಿಯ ಮುಖಂಡ ಎಂ.ಎಂ. ಲಕ್ಷ್ಮಣ್ ಗೌಡ, ಡಿ.ಎಂ. ಪುಟ್ಟೇಗೌಡ, ಎಂ.ಪಿ. ಮನು ಮಾತನಾಡಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತ ಹೂವಪ್ಪ ತನ್ನ 40 ಜನ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಗೊಂಡರು.
ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಬಿಳಗುಳ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಮುಖಂಡ ಸಿ.ಎಂ. ಗೋಪಾಲಗೌಡ ಸೇರಿದಂತೆ ಇತರೆ ಐವರನ್ನು ಪಕ್ಷ ವಿರೋಧಿ ಚಟುವಟಿಕೆಯಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಸಸ್ಪೆಂಡ್ಗೊಳಿಸಲಾಗಿದೆ ಎಂದು ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ಮನು ಹೇಳಿದ್ದಾರೆ.
ಇದರೊಂದಿಗೆ ಮೀಸಲು ಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಕಾಂಗ್ರೆಸ್ ಮುಖಂಡ ಸಿ.ಎಂ. ಗೋಪಾಲಗೌಡ, ತಾಪಂ ಸದಸ್ಯಎ.ಜೆ. ಸುಬ್ರಾಯ. ಸುಧಾ ಮಂಜುನಾಥ್, ಮಹಮ್ಮದ್ ನೂರೂಲ್ಲಾ, ಪುಟ್ಟಸ್ವಾಮಿ ಚಿನ್ನಿಗ, ಐವರು ಕಾಂಗ್ರೆಸ್ ಮುಖಂಡರನ್ನು ಸಸ್ಪೆಂಡ್ ಮಾಡಿದಂತಾಗಿದೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೆಲವರು ಅಪಪ್ರಚಾರ ನಡೆಸುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಕೆಪಿಸಿಸಿ ಆದೇಶದನ್ವಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ಮನು ಕಠಿಣ ಶಿಸ್ತು ಕ್ರಮ ಜರುಗಿಸಿರುವುದಾಗಿ ತಿಳಿಸಿದ್ದಾರೆ.