ಪ್ರಕೃತಿ ವಿಕೋಪ: ತುರ್ತು ಪರಿಹಾರ ನೀಡಲು ಸೂಚನೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಆ.1
ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಪ್ರಕೃತಿ ವಿಕೋಪ ತುರ್ತು ಪರಿಹಾರ ನಿಧಿಯಿಂದ ಪರಿಹಾರ ನೀಡಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಹಣಕಾಸು ಲೆಕ್ಕ ಪರಿಶೋಧನೆ ಹಾಗೂ ಯೋಜನಾ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಮಳೆಯಿಂದ ಹಾನಿಗೀಡಾದ ಗ್ರಾಮೀಣ ಭಾಗದ 8 ಮನೆಗಳಿಗೆ ತಲಾ 2 ಸಾವಿರ ಪರಿಹಾರವನ್ನು ಪ್ರಕೃತಿ ವಿಕೋಪ ತುರ್ತು ಪರಿಹಾರ ನಿಧಿಯಿಂದ ನೀಡಲಾಗುವುದು ಎಂದರು.
ಶಾಲಾ ಕಟ್ಟಡಗಳ ಕಾಮಗಾರಿಗಳ ಬಗ್ಗೆ ಅನೇಕ ದೂರುಗಳಿದ್ದು, ಈ ಬಗ್ಗೆ ಕಟ್ಟಡಗಳ ನಿರ್ಮಾಣದ ಅವಧಿ ಮತ್ತು ಅವುಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಿರೇನಲ್ಲೂರಿನ ಕೃಷಿ ರೈತ ಸಂಪರ್ಕ ಕಟ್ಟಡದ ಕಾಮಗಾರಿಯ ಗುಣಮಟ್ಟ ಪರಿಶೀಲಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಹಣಕಾಸು ಲೆಕ್ಕ ಪರಿಶೋಧನೆ ಹಾಗೂ ಯೋಜನಾ ಸ್ಥಾಯಿ ಸಮಿತಿಯ ಸದಸ್ಯರುಗಳಾದ ಸುಧಾ ಅಮೃತೇಶ್, ಪ್ರಫುಲ್ಲಾ ಮಂಜುನಾಥ್, ಪದ್ಮಾ ಚಂದ್ರಪ್ಪ, ಹೆಚ್.ಸಿ. ಕಲ್ಮುರಡಪ್ಪ ಹಾಗೂ ಕೆ.ಎಸ್. ಹೇಮಾವತಿ ಉಪಸ್ಥಿತರಿದ್ದರು.