ಮಣ್ಣಿನ ಗುಡ್ಡ ಕುಸಿತ: ಸಂಚಾರ ಅಸ್ತವ್ಯಸ್ತ
ಮೂಡಿಗೆರೆ: ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರಿಗೆ ಹೆದ್ದಾರಿಯಾದ ಚಾರ್ಮಾಡಿ ಘಾಟ್ ರಸ್ತೆಯ ಶ್ರೀ ಅಣ್ಣಪ್ಪ ಸ್ವಾಮಿ ದೇವಾಲಯದ ಸಮೀಪವಿರುವ ಮಣ್ಣಿನ ಗುಡ್ಡ ಕುಸಿದಿದ್ದರ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿತು.
ಇದರಿಂದ ಪ್ರಾಯಾಣಿಕರು ಮೂರು ಗಂಟೆಗಳ ಕಾಲ ಯಾವ ಕಡೆಗೂ ಹೋಗದ ರೀತಿಯಲ್ಲಿ ಮಧ್ಯದಾರಿಯಲ್ಲಿ ಅತಂತ್ರ ಸ್ಥಿತಿಗೆ ಒಳಗಾಗಿದ್ದರು.
ಗುರುವಾರದ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಮೂಡಿಗೆರೆ ತಾಲೂಕಿನ ಬಣಕಲ್ ವ್ಯಾಪ್ತಿಯ ಶ್ರೀ ಅಣ್ಣಪ್ಪ ಸ್ವಾಮಿ ದೇವಾಲಯದ ಸಮೀಪದಲ್ಲೇ ಮಣ್ಣಿನ ಗುಡ್ಡ ಕುಸಿದಿತ್ತು. ದಕ್ಷಿಣ ಕನ್ನಡದಿಂದ ಚಿಕ್ಕಮಗಳೂರು ಕಡೆಗೆ, ಚಿಕ್ಕಮಗಳುರಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗುವ ವಾಹನಗಳು ಘಾಟಿಯ ಮಧ್ಯದಲ್ಲೆ ಸಿಲುಕಿದ್ದ ಕಾರಣ ಹಿಂದೆ ಬರಲು ಆಗದೆ, ಮುಂದೆ ಹೋಗಲು ಆಗದೆ ಜೋರಾಗಿ ಬೀಸುತ್ತಿದ್ದ ಗಾಳಿ ಮಳೆಯಲ್ಲಿ ವಾಹನಗಳು ಮತ್ತು ಪ್ರಯಾಣಿಕರು ಸಿಲುಕಿಕೊಂಡಿದ್ದರು.
ವಿಷಯ ತಿಳಿದ ತಹಸೀಲ್ದಾರ್ ರುದ್ರಪ್ಪಾಜೀ ರಾವ್, ಬಣಕಲ್ ಪೊಲೀಸರು ಮತ್ತು ಲೋಕೋಪಯೋಗಿ ಇಲಾಕೆಯ ಸಹಕಾರದಿಂದ ಜೇಸಿಬಿ ಯಂತ್ರದ ಸಹಾಯದಿಂದ ಸಂಚಾರಕ್ಕೆ ಅಡ್ಡಲಾಗಿ ಬಿದ್ದಿದ್ದ ಮಣ್ಣನ್ನು ತೆಗಿಸುವಲ್ಲಿ ಯಶಸ್ವಿಯಾದರು. ಸಂಜೆ ಆರು ಗಂಟೆಗೆ ಚಾರ್ಮಾಡಿ ಘಾಟ್ ರಸ್ತೆ ತೆರವುಗೊಳಿಸುವ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.