ಮುಂದುವರೆದ ವರುಣನ ಆರ್ಭಟ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಆ.1
ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಮಲೆನಾಡಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ನಾಲ್ಕು ತಾಲೂಕುಗಳಲ್ಲಿ ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ ನೀಡಲಾಗಿದೆ.
ಜಿಲ್ಲೆಯ ಮಲೆನಾಡಿನ ತಾಲೂಕುಗಳಾದ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳಲ್ಲಿ ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮಳೆ ಇದೇ ರೀತಿಯಲ್ಲಿ ಮುಂದುವರಿದರೆ ಮುಂದಿನ ಪರಿಸ್ಥಿತಿಯನ್ನು ನೋಡಿ ರಜೆ ವಿಸ್ತರಣೆ ಮಾಡಲು ತಹಸೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಜಿ.ಬಿ. ರಾಜಪ್ಪ “OÚ«ÚsÚ®ÚúڒOæQ ತಿಳಿಸಿದ್ದಾರೆ.
2 ದಿನಗಳಿಂದ ಮುಂದುವರಿದ ಮಳೆ: ಕಳೆದ ಒಂದು ತಿಂಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಬಿಡುವಿಲ್ಲದೆ ಸುರಿಯುತ್ತಿದೆ. ಕಳೆದ ಎರಡು ವಾರಗಳ ಹಿಂದೆ ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿದ್ದವು. ನೆರೆಯಿಂದಾಗಿ ಹಲವೆಡೆ ರಸ್ತೆ ಸಂಪರ್ಕ ಕಡಿದು ಹೋಗಿತ್ತು. ನಂತರ ಮಳೆಯ ಅಬ್ಬರ ಕಡಿಮೆಯಾಗಿ, ನದಿಗಳ ನೀರಿನ ಮಟ್ಟ ಇಳಿಮುಖವಾಗಿತ್ತು. ಆದರೆ, ಮಳೆ ಪೂರ್ಣ ಪ್ರಮಾಣದಲ್ಲಿ ಬಿಡುವು ನೀಡಿರಲಿಲ್ಲ. ಕಳೆದ ಎರಡು ದಿನಗಳಿಂದ ಮತ್ತೆ ಮಳೆಯ ಆರ್ಭಟ ಹೆಚ್ಚಾಗಿದೆ.
ಕುದುರೆಮುಖ- ಕಳಸ ಭಾಗಗಳಲ್ಲೂ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಗುರುವಾರ ಮುಂಜಾನೆಯಿಂದ ಭದ್ರಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬಾಳೆಹೊನ್ನೂರಿನ ಡೋಬಿ ಹಳ್ಳದಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಅಸುಪಾಸಿನ ತೋಟಗಳು ಜಲಾವೃತವಾಗಿವೆ. ಭದ್ರಾನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಕಳಸ- ಹೊರನಾಡು ಹಾಗೂ ಕೊಟ್ಟಿಗೆಹಾರ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿದುಕೊಳ್ಳುವ ಸಾಧ್ಯತೆಯಿದ್ದು, ಬೈರೇಗುಡ್ಡ ಹಾಗೂ ಜಕ್ಕಣಕ್ಕಿ ಬಳಿ ಭದ್ರಾನದಿಯ ನೀರು ಮುಖ್ಯ ರಸ್ತೆಯಂಚಿನಲ್ಲಿ ಹರಿಯತೊಡಗಿದೆ.
ಸಂಪರ್ಕ ಸ್ಥಗಿತ: ಸಮೀಪದ ಮೇಗುಂದಾ ಹೋಬಳಿಯ ಕೊಗ್ರೆ- ಮೇಗೂರು- ಬಲಿಗೆ ಮೂಲಕ ಹೊರನಾಡು ಸಂಪರ್ಕ ಕಲ್ಪಿಸುವ ರಸ್ತೆ ಬಳಿ ಧರೆ ಕುಸಿತ ಸಂಭವಿಸಿದ್ದು, ಹೊರನಾಡು ಸಂಪರ್ಕ ಕಡಿತಗೊಂಡಿದೆ. ಹೇರೂರು ಹ್ಯಾಂಡ್ಪೋಸ್ಟ್ ಮೂಲಕ ಬಸರೀಕಟ್ಟೆ ಸಂಪರ್ಕ ಕಲ್ಪಿಸುವ ಕಟ್ಟಿನಮನೆ ಬಳಿ ಭಾರಿ ಮರವೊಂದು ಧರೆಗುರುಳಿ ಮುಖ್ಯರಸ್ತೆ ಸಂಚಾರ ಸ್ಥಗಿತಗೊಂಡಿದೆ.
ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಮತ್ತೆ ನೆರೆ ಹಾವಳಿಯ ಭೀತಿ ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಎದುರಾಗಿದೆ. ಮಳೆಯಿಂದಾಗಿ ಹಲವೆಡೆ ಭೂ ಕುಸಿತ ಉಂಟಾಗುತ್ತಿದೆ. ಇದರ ಜತೆಗೆ ಮನೆಗಳಿಗೆ ಹಾನಿ ಸಂಭವಿಸುತ್ತಿದೆ. ಬಯಲುಸೀಮೆ ತಾಲೂಕುಗಳಾದ ಕಡೂರು ಹಾಗೂ ತರೀಕೆರೆ ತಾಲೂಕಿನಲ್ಲೂ ಮಳೆ ಮುಂದುವರೆದಿದೆ.
ನಷ್ಟ: ಮಳೆಯಿಂದಾಗಿ ಮಲೆನಾಡಿನಲ್ಲಿ ಕಾಫಿ, ಅಡಕೆ, ತೆಂಗು, ಕಾಳು ಮೆಣಸು, ಶುಂಠಿ ಬೆಳೆಗಳಿಗೆ ರೋಗಬಾಧೆ ಕಾಣಿಸಿಕೊಂಡಿದ್ದು, ಇದರಿಂದಾಗಿ ಬೆಳೆಗಾರರಿಗೆ ಅಪಾರ ನಷ್ಟ ಸಂಭವಿಸಿದೆ.
ರೋಗಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಔಷಧಿ ಸಿಂಪಡಣೆ ಮಾಡಲು ಮಳೆ ಬಿಡುವು ನೀಡುತ್ತಿಲ್ಲ. ಆಲೂಗಡ್ಡೆ, ಈರುಳ್ಳಿ ಸೇರಿದಂತೆ ತರಕಾರಿ ಬೆಳೆಗಳು ಸಹ ಅಪರ ತೇವಾಂಶದಿಂದಾಗಿ ಕೊಳೆಯುತ್ತಿವೆ. ತರಕಾರಿ ಬೆಳೆದ ರೈತರಿಗೆ ನಷ್ಟವಾಗಿದೆ. ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ಮಳೆಯ ವಿವರ: ಕಳೆದ ದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಬಿದ್ದ ಮಳೆಯ ವಿವರ ಈ ಕೆಳಕಂಡಂತೆ ಇದೆ. ಚಿಕ್ಕಮಗಳೂರು ನಗರ- 13.8 ಮಿ.ಮೀ., ವಸ್ತಾರೆ- 15.2, ಜೋಳದಾಳ್- 39, ಆಲ್ದೂರು- 38.5, ಕೆ.ಆರ್. ಪೇಟೆ- 14.5, ಅತ್ತಿಗುಂಡಿ- 16.6, ಸಂಗಮೇಶ್ವರಪೇಟೆ- 43, ಮಳಲೂರು- 14.2 ದಾಸರಹಳ್ಳಿ- 9. ಕಡೂರು- 1.2, ಸಖರಾಯಪಟ್ಟಣ- 4.2 ಗಿರಿಯಾಪುರ- 5, ಬೀರೂರು- 3.1, ಎಮ್ಮೆದೊಡ್ಡಿ- 8, ಕೊಪ್ಪ- 70, ಹರಿಹರಪುರ- 94.1, ಜಯಪುರ- 62.1, ಕಮ್ಮರಡಿ- 115.5, ಬಸರೀಕಟ್ಟೆ- 55.6, ಮೂಡಿಗೆರೆ- 118.8, ಕೊಟ್ಟಿಗೆಹಾರ- 260, ಜಾವಳ್ಳಿ- 105, ಗೋಣಿಬೀಡು- 98, ಕಳಸ- 155.6. ಬಾಳೆಹೊನ್ನೂರು- 58.8, ಮೇಗರಮಕ್ಕಿ- 20, ಎನ್.ಆರ್.ಪುರ- 35.2, ಕಿಗ್ಗಾ- 73.1, ಕೆರೆಕಟ್ಟೆ- 118.4, ಶೃಂಗೇರಿ- 47.6, ಲಕ್ಕವಳ್ಳಿ- 15, ಅಜ್ಜಂಪುರ- 14, ಶಿವನಿ- 18.4, ಬುಕ್ಕಾಂಬುದಿ- 20.2, ಲಿಂಗದಹಳ್ಳಿ- 8.2, ತಣೀಗೆಬೈಲು- 14.2, ಉಡೆವಾ- 11.2, ಹುಣಸಘಟ್ಟ- 13, ರಂಗೇನಹಳ್ಳಿ- 18.6, ತರೀಕೆರೆಯಲ್ಲಿ 13.2 ಮಿ.ಮೀ. ಮಳೆ ಬಂದಿದೆ.
ಗಾಳಿ, ಮಳೆ: ವಿದ್ಯುತ್ ಮಾರ್ಗಕ್ಕೆ ಹಾನಿ
ಮೂಡಿಗೆರೆ: ಕಳೆದ ನಾಲ್ಕು ದಿನಗಳಿಂದ ಬಿಡದೆ ಸುರಿಯುತ್ತಿರುವ ಗಾಳಿ ಮಳೆಯಿಂದ ತಾಲೂಕಿನ ಎಲ್ಲಾ ವಿದ್ಯುತ್ ಮಾರ್ಗಗಳ ಮೇಲೆ ಮರಗಳು ಬಿದ್ದು ತಂತಿಗಳು ತುಂಡಾಗಿದ್ದು, ಕಂಬಗಳು ಮುರಿದಿದ್ದು ಬಾರಿ ಹಾನಿ ಉಂಟಾಗಿದೆ ಎಂದು ಮೆಸ್ಕಾಂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ದುರಸ್ತಿ ಕಾರ್ಯ ಕುಂಠಿತವಾಗಿದ್ದು. ತಾಲುಕಿನ ಎಲ್ಲಾ ಗ್ರಾಹಕರು ಮತ್ತು ಸಾರ್ವಜನಿಕರು ದುರಸ್ತಿ ಕಾರ್ಯ ಮುಗಿಯುವವರೆಗೂ ಇಲಾಖೆಯೊಂದಿಗೆ ಸಹಕರಿಸುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.