ವಾರ್ಷಿಕ ಆಡಿ ಕೃತ್ತಿಕಾ ಕಾವಡಿ ಉತ್ಸವ
ಚಿಕ್ಕಮಗಳೂರು: ತಾಲೂಕಿನ ಇತಿಹಾಸ ಪ್ರಸಿದ್ಧ ಕುಮಾರಗಿರಿಯಲ್ಲಿ ವಾರ್ಷಿಕ ಆಡಿ ಕೃತ್ತಿಕಾ ಕಾವಡಿ ಉತ್ಸವ ನೂರಾರು ಭಕ್ತರ ನಡುವೆ ಬುಧವಾರ ಶ್ರದ್ಧಾಭಕ್ತಿಯಿಂದ ಜರುಗಿತು.
ಉತ್ಸವದ ಅಂಗವಾಗಿ ಕ್ಷೇತ್ರದ ಅಧಿದೇವತೆ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ಅಭಿಷೇಕ, ಅಲಂಕಾರ, ವಿಶೇಷ ಪೂಜೆ ನಡೆಯಿತು. ನಂತರ ಸುತ್ತಮುತ್ತಲ ಗ್ರಾಮಗಳಿಂದ ಕಾವಡಿಯನ್ನು ಹೊತ್ತು ಮಳೆಯ ನಡುವೆ ಕಾಲ್ನಡಿಗೆಯಲ್ಲಿ ಆಗಮಿಸಿದ ನೂರಾರು ತಮಿಳು ಭಕ್ತರು ಸನ್ನಿಧಿಯಲ್ಲಿ ಕಾವಡಿಯನ್ನು ಸಮರ್ಪಿಸಿದರು.
ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು. ಸಂಜೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ಮಾಡಲಾಯಿತು.
ಇದೇ ವೇಳೆ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಸಮಿತಿ ವತಿಯಿಂದ ವನಮಹೋತ್ಸವ ಆಚರಿಸಲಾಯಿತು. ವೃಕ್ಷ ಲಕ್ಷ ಅಭಿಯಾನದಡಿ ಅರಣ್ಯ ಇಲಾಖೆ ವತಿಯಿಂದ ನೀಡಲಾದ ನೂರಾರು ಸಸಿಗಳನ್ನು ದೇವಾಲಯದಲ್ಲಿಟ್ಟು ಪೂಜೆ ಸಲ್ಲಿಸಲಾಯಿತು.
ನಂತರ ಸಸಿಗಳನ್ನು ಹೊತ್ತು ದೇವಾಲಯದ ಸುತ್ತ ಮೆರವಣಿಗೆ ನಡೆಸಿ ಕ್ಷೇತ್ರದ ಆವರಣದಲ್ಲಿ ನೆಡಲಾಯಿತು.
ವಲಯ ಅರಣ್ಯಾಧಿಕಾರಿ ಹೆಚ್.ಕೆ. ಜಯಕುಮಾರ್, ದೇವಾಲಯ ಸಮಿತಿ ಅಧ್ಯಕ್ಷ ಎ. ಚಿನ್ನಸ್ವಾಮಿ, ಉಪಾಧ್ಯಕ್ಷ ಜಿ. ರಮೇಶ್, ಖಜಾಂಚಿ ಗುಣಶೇಖರ್, ಕೇಶವನ್, ಜಿ. ಶಂಕರ್, ಸುಬ್ರಹ್ಮಣ್ಯ ಭಾರತೀ ಮಹಾಸಭಾದ ಅಧ್ಯಕ್ಷ ವಿ. ಆರ್ಮುಗಂ ಉಪಸ್ಥಿತರಿದ್ದರು.