ಆಧಾರ್ ಕಾರ್ಡ್ ನೋಂದಣಿ ಕೇಂದ್ರ ಪ್ರಾರಂಭ
ಕ.ಪ್ರ.ವಾರ್ತೆ, ಬಾಳೆಹೊನ್ನೂರು, ಆ.2
ಬಾಳೆಹೊನ್ನೂರು ಹೋಬಳಿಯ ನಾಗರಿಕರ ಬಹುದಿನಗಳ ಬೇಡಿಕೆಯಾದ ಆಧಾರ್ ಕಾರ್ಡ್ ನೋಂದಣಿ ಕೇಂದ್ರ ಶುಕ್ರವಾರದಿಂದ ಇಲ್ಲಿನ ಪಂಚಾಯಿತಿ ಕಚೇರಿಯಲ್ಲಿ ಆರಂಭಗೊಂಡಿದ್ದು, ಮೊದಲ ದಿನವೇ ಕಾರ್ಡ್ಗೆ ನೋಂದಾಯಿಸಲು ಜನ ಮುಗಿಬಿದ್ದಿದ್ದರು.
ಇಲ್ಲಿನ ಕೇಂದ್ರದಲ್ಲಿ ಪ್ರಸ್ತುತ 4 ಕಂಪ್ಯೂಟರ್ಗಳನ್ನು ಅಳವಡಿಸಿದ್ದು, ಸ್ಥಳಾವಕಾಶದ ಕೊರತೆಯಿಂದ ಇನ್ನೆರಡು ಕಂಪ್ಯೂಟರ್ಗಳನ್ನು ಅಳವಡಿಸಲಾಗಿಲ್ಲ. ಗ್ರಾಮ ಪಂಚಾಯಿತಿಯವರು ಕೂಡಲೇ ಇನ್ನಷ್ಟು ಸ್ಥಳ ನೀಡುವುದಾಗಿ ತಿಳಿಸಿದ್ದು, ಶೀಘ್ರದಲ್ಲಿ ಪುನಃ ಎರಡು ಕಂಪ್ಯೂಟರ್ಗಳನ್ನು ಅಳವಡಿಸಲಾಗುವುದು ಎಂದು ಕೇಂದ್ರದ ಮುಖ್ಯಸ್ಥ ವೇಣುಗೋಪಾಲ್ ತಿಳಿಸಿದ್ದಾರೆ.
ಪ್ರಸ್ತುತ ಒಂದು ವಾರದವರೆಗೆ 100 ಅರ್ಜಿಗಳನ್ನು ನೀಡಿ ಮಾಹಿತಿಗಳನ್ನು ಪಡೆಯಲಾಗುತ್ತಿದೆ. ವಾರದ ನಂತರ 150 ರಿಂದ 200 ಅರ್ಜಿ ಫಾರಂಗಳನ್ನು ನೀಡಿ ಮಾಹಿತಿಗಳನ್ನು ಸಾರ್ವಜನಿಕರಿಂದ ಪಡೆಯಲಾಗುವುದು.
ಈ ತಿಂಗಳ ಸ್ವಾತಂತ್ರ್ಯೋತ್ಸವದಂದು ಹೊರತುಪಡಿಸಿ ಭಾನುವಾರವೂ ಸೇರಿದಂತೆ ಎಲ್ಲಾ ದಿನಗಳಲ್ಲೂ ಕೇಂದ್ರ ಕಾರ್ಯನಿರ್ವಹಿಸಲಿದೆ. ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಅರ್ಜಿಗೆ ನೋಂದಾಯಿಸಲು ಪ್ರಮುಖವಾಗಿ ಪಡಿತರ ಚೀಟಿ, ಚುನಾವಣಾ ಮತದಾರರ ಚೀಟಿ ನಕಲು ಹಾಗೂ ಕೇಂದ್ರ, ರಾಜ್ಯ ಸರ್ಕಾರದಿಂದ ನೀಡಿರುವ ಯಾವುದಾದರೂ ಮೂಲ ದಾಖಲೆಗಳನ್ನು ಹಾಜರುಪಡಿಸಬಹುದು.
ಆರು ತಿಂಗಳ ಶಿಶುಗಳಿಂದ ಹಿಡಿದು ಪ್ರತಿಯೊಬ್ಬ ಸಾರ್ವಜನಿಕರನ್ನೂ ನೋಂದಾಯಿಸುತ್ತಿದ್ದು, ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗದೇ ಆಧಾರ್ ನೋಂದಣಿ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.