ವಿದ್ಯುತ್ ಸಂಪರ್ಕ: ಮೆಸ್ಕಾಂಗೆ ಸೆಪ್ಟೆಂಬರ್ ಡೆಡ್ ಲೈನ್
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಆ.2
ಗ್ರಾಮಾಂತರ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಕಾಲದಲ್ಲಿ ಸಾಧ್ಯವಾಗುತ್ತಿಲ್ಲ. ಇಂತಹ ಕಾಮಗಾರಿಗೆ ಬರುವ ಸೆಪ್ಟಂಬರ್ ಅಂತ್ಯದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮೆಸ್ಕಾಂ ಅಧಿಕಾರಿಗಳಿಗೆ ಡೆಡ್ ಲೈನ್ ನೀಡಿದ್ದಾರೆ.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೇಂದ್ರ ಸರ್ಕಾರ ಪ್ರಾಯೋಜಿತ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
902 ಯೋಜನೆ: ಗ್ರಾಮಾಂತರ ಕುಡಿಯುವ ನೀರು ಪೂರೈಕೆ ಯೋಜನೆಯಡಿ (ಎಆರ್ಡಬ್ಲ್ಯೂಎಸ್ಪಿ) ಜಿಲ್ಲೆಯಲ್ಲಿ 902 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ 570 ಕಾಮಗಾರಿ ಪೂರ್ಣಗೊಂಡಿವೆ. ಇನ್ನು 332 ಕಾಮಗಾರಿ ಪ್ರಗತಿಯಲ್ಲಿವೆ. ಇವುಗಳಲ್ಲಿ 118 ಕಾಮಗಾರಿಗಳು ಮೆಸ್ಕಾಂನಿಂದ ವಿದ್ಯುತ್ ಸಂಪರ್ಕದ ಅನುಮತಿಗಾಗಿ ಕಾಯುತ್ತಿವೆ. ಇದರಿಂದಾಗಿ ಜನರಿಗೆ ತುಂಬಾ ತೊಂದರೆಯಾಗಿದೆ ಎಂದು ಹೇಳಿದರು. ವಿಧಾನಸಭಾ ಚುನಾವಣೆ, ಇದೀಗ ಮಳೆಯಿಂದಾಗಿ ಸಕಾಲದಲ್ಲಿ ಕಾಮಗಾರಿ ಪೂರೈಸಲು ಮೆಸ್ಕಾಂಗೆ ಸಾಧ್ಯವಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಈ ಕಾರಣ ನೀಡದೇ ಬಾಕಿ ಇರುವ ಎಲ್ಲಾ ಕಾಮಗಾರಿಗೆ ಸೆಪ್ಟಂಬರ್ ಅಂತ್ಯದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ತಿಳಿಸಿದರು.
ವಾಸ್ತವವೇನು?: 570 ಕಾಮಗಾರಿಗಳು ಪೂರ್ಣಗೊಂಡಿವೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ, ಇದು, ಅಂಕಿಅಂಶಕ್ಕೆ ಮಾತ್ರ ಸೀಮಿತವೇ, ವಾಸ್ತವಿಕವಾಗಿ ಕಾಮಗಾರಿಗೆ ಪೂರ್ಣಗೊಂಡಿವೆಯೇ ಎಂದು ಶಾಸಕ ಸಿ.ಟಿ. ರವಿ ಪ್ರಶ್ನಿಸಿದರು.
ಬಹಳಷ್ಟು ಕಡೆ ಇಂದಿಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಕೊರೆದಿರುವ ಕೊಳವೆ ಬಾವಿಗಳಲ್ಲಿ ನೀರಿಲ್ಲ. ಗುತ್ತಿಗೆದಾರರಿಗೆ ಅನುಕೂಲವಾಗಲು ಯೋಜನೆ ಸೃಷ್ಟಿಸಲಾಗುತ್ತಿದೆಯೇ ಎಂದು ಸಿ.ಟಿ. ರವಿ ಹೇಳಿದರು.
ನೆನೆಗುದಿಗೆ: ಕಳಸ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಹಲವು ವರ್ಷದಿಂದ ನೆನೆಗುದಿಗೆ ಬಿದ್ದಿದೆ. ಈ ಸಂಬಂಧ ಹಲವು ಬಾರಿ ಸರ್ಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೂಡಿಗೆರೆ ತಾಪಂ ಅಧ್ಯಕ್ಷ ಶೇಷಗಿರಿ ಹೇಳಿದರು.
ಇದಕ್ಕೆ ಉತ್ತರಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾಮಗಾರಿ ಸ್ಥಳ ಕುದುರೆಮುಖ ರಾಷ್ಟ್ರೀಯ ವನ್ಯಜೀವಿ ಅರಣ್ಯ ಸಂರಕ್ಷಣಾ ವಲಯದಲ್ಲಿ ಬರುವುದರಿಂದ ಕಾಮಗಾರಿ ಮಾಡಲು ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿರುತ್ತದೆ. ಅದುದರಿಂದ ಅರಣ್ಯ ಇಲಾಖೆ ಒಪ್ಪಿಗೆಗಾಗಿ ಪತ್ರ ವ್ಯವಹಾರ ಮಾಡಲಾಗಿದ್ದು, ಈ ಪ್ರಸ್ತಾವನೆಯನ್ನು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಪ್ರತ್ಯೇಕ ಎಂಜಿನಿಯರ್: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ವಿಷಯ ಚರ್ಚೆಗೆ ಬಂದಾಗ ಈ ಯೋಜನೆಯ ಕಾಮಗಾರಿಗಳನ್ನು ನಿರ್ವಹಿಸಲು ಪ್ರತ್ಯೇಕವಾಗಿ ಎಂಜಿನಿಯರ್ಗಳನ್ನು ನೇಮಕ ಮಾಡಿಕೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿದೆ ಎಂದರು.
ಅದರಂತೆ ಜಿಲ್ಲೆಗೆ 40 ಜನ ಎಂಜಿನಿಯರ್ಗಳನ್ನು ನೇಮಕ ಮಾಡಲಾಗುವುದು. ಇದೀಗ 27 ಎಂಜಿನಿಯರ್ಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅವರಿಗೆ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಜಿ ಪಂ ಸಿಇಒ ಪಿ. ಶಿವಶಂಕರ್ ಹೇಳಿದರು.
ಹಣದ ಕೊರತೆ ಇಲ್ಲ: ಉದ್ಯೋಗ ಖಾತ್ರಿ ಯೋಜನೆಗೆ ಹಣದ ಕೊರತೆ ಇಲ್ಲ. ಕಾಮಗಾರಿ ಪೂರ್ಣಗೊಂಡ 15 ದಿನಳೊಳಗೆ ಹಣ ಬಿಡುಗಡೆಯಾಗಲಿದೆ. ಜಿಲ್ಲೆಯ ಕಾವೇರಿ ಗ್ರಾಮೀಣ ಬ್ಯಾಂಕ್ನಲ್ಲಿದ್ದ 18,000 ಅಕೌಂಟ್ಗಳ ಎಎಫ್ಸಿ ಕೋಡ್ ಬದಲಾವಣೆಯಿಂದಾಗಿ ಹಣ ಜಮಾವಾಗಲು ತಡವಾಗಿತ್ತು. ಈಗಾಗಲೇ 15 ಗ್ರಾಪಂ ವ್ಯಾಪ್ತಿಯಲ್ಲಿನ ಅಕೌಂಟ್ಗಳನ್ನು ಬದಲಾವಣೆಯಾಗಿವೆ. ಇನ್ನುಳಿದ ಅಕೌಂಟ್ಗಳ ಬದಲಾವಣೆ ಕಾರ್ಯ ಪ್ರಗತಿಯಲ್ಲಿದೆ ಎಂದರು. ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿಲ್ಲಾಧಿಕಾರಿ ಯಶ್ವಂತ್, ಜಿಲ್ಲಾ ರಕ್ಷಣಾಧಿಕಾರಿ ರವಿಕುಮಾರ್ ಇದ್ದರು.
570 ಕಾಮಗಾರಿಗಳು ಪೂರ್ಣಗೊಂಡಿವೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ, ಇದು, ಅಂಕಿಅಂಶಕ್ಕೆ ಮಾತ್ರ ಸೀಮಿತವೇ ಅಥವಾ ವಾಸ್ತವಿಕವಾಗಿ ಕಾಮಗಾರಿಗೆ ಪೂರ್ಣಗೊಂಡಿವೆ
ಸಿ.ಟಿ. ರವಿ
ಶಾಸಕ ಚಿಕ್ಕಮಗಳೂರು