ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡಲು ಸಚಿನ್ ಮೀಗಾ ಮನವಿ

Mainashree
Updated On : 4 Aug 2013, 1:00 am

ಚಿಕ್ಕಮಗಳೂರು: ಹಳದಿ ಎಲೆ ರೋಗ ಪೀಡಿತ ಅಡಕೆ ತೋಟಗಳ ಮಾಲೀಕರ ಸಾಲ ಮನ್ನಾ ಮಾಡಲು ಈ ಹಿಂದೆ ಕೊಟ್ಟ  ಮಾತಿನಂತೆ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ತಿಳಿಸಲು ಕೆಪಿಸಿಸಿ ಕಿಸಾನ್ ಘಟಕದ ಉಪಾಧ್ಯಕ್ಷ ಸಚಿನ್ ಮೀಗಾ ಅವರು ಪಕ್ಷದ ರಾಜ್ಯ ಉಸ್ತುವಾರಿಗಳಾದ ದಿಗ್ವಿಜಯಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
 ಕಳೆದ ನಾಲ್ಕು ತಿಂಗಳ ಹಿಂದೆ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಗೆದ್ದು ಬಂದರೆ ಹಳದಿ ಎಲೆ ರೋಗ ಪೀಡಿತ ಅಡಿಕೆ ತೋಟಗಳ ಮಾಲೀಕರ ಸಾಲ ಮನ್ನಾ ಮಾಡಲಾಗುವುದೆಂದು ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ಮಂಡಿಸಿರುವ ಬಜೆಟ್‌ನಲ್ಲಿ ಸಾಲ ಮನ್ನಾ ವಿಷಯ ಪ್ರಸ್ತಾಪವಾಗಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಿರೀಕ್ಷಿತ ಫಸಲು ಮರೀಚಿಕೆ: ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸತತ ಮಳೆ ಬೀಳುತ್ತಿರುವುದರಿಂದ ಅಡಕೆ ಬೆಳೆಗೆ ಕೊಳೆ ರೋಗ ತಗುಲಿ ಅಡಕೆ ಫಸಲು ಕೊಳೆರೋಗದಿಂದ ನಾಶವಾಗಿದೆ. ಇದರ ಪರಿಣಾಮ ಇನ್ನೂ 3 ವರ್ಷ ಅಡಕೆ ಮರ ಚೇತರಿಸಿಕೊಳ್ಳಲು ಅವಕಾಶ ಬೇಕಾಗುತ್ತದೆ. ಅಡಕೆ ಬೆಳೆಗಾರರಿಗೆ ನಿರೀಕ್ಷಿತ ಮಟ್ಟದಲ್ಲಿ ಫಸಲು ಸಿಗುವುದು ಕಷ್ಟವಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ರಾಜ್ಯದ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳು ಅಡಕೆ ಬೆಳೆಗಾರರ ಸಾಲ ವಸೂಲಿ ಮಾಡುವ ದೃಷ್ಟಿಯಿಂದ ನಿರಂತರವಾಗಿ ನೋಟಿಸ್ ಜಾರಿ ಮಾಡುವುದು ಹಾಗೂ ರೈತರ ಮೇಲೆ ಸಿವಿಲ್ ದಾವೆ  ಹೂಡಲು ಮುಂದಾಗುತ್ತಿದ್ದಾರೆ.
ಆದರೆ, ಮಲೆನಾಡಿನ ಹಾಗೂ ಕರಾವಳಿ ಭಾಗದ ಅಡಿಕೆ ಬೆಳೆಗಾರರು ಹಲವಾರು ವರ್ಷದಿಂದ ಹಳದಿ ಎಲೆ, ಕೊಳೆ, ಬೇರುಹುಳ ಸೇರಿದಂತೆ ವಿವಿಧ ಹಾಗೂ ಇತರೆ ರೋಗಗಳಿಂದ ಫಸಲನ್ನು ಕಳೆದುಕೊಂಡು ಬ್ಯಾಂಕುಗಳಿಂದ ಪಡೆದ ಸಾಲ  ತೀರಿಸಲಾಗದೆ ಸಾಕಷ್ಟು ರೈತರು ಈಗಾಗಲೇ  ಗುಳೇ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ವಿಪರೀತ ಪರಿಣಾಮ: ಬ್ಯಾಂಕುಗಳು ಬಲವಂತವಾಗಿ ರೈತರ ಸಾಲವನ್ನು ವಸೂಲಿ ಮಾಡಲು ಮುಂದಾದರೆ ಹಲವಾರು ರೈತರು ಆತ್ಮಹತ್ಯೆಯಂತಹ ಘಟನಾವಳಿಗಳಿಗೆ ಮುಂದಾಗಿ ವಿಪರೀತ ಪರಿಣಾಮ ಬೀರುವ ಸಾಧ್ಯತೆ ಇದೆ.  ಈಗಾಗಲೆ ಎ.ಐ.ಸಿ.ಸಿ.ಯ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಎಲ್ಲಾ ಅಂಶಗಳನ್ನು ಅನುಷ್ಠಾನಗೊಳಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದರು.
ಈಗಾಗಲೇ ರಾಜ್ಯದ ಹೈಕೋರ್ಟ್ ಕೂಡ ರೈತರ ಆತ್ಮಹತ್ಯೆ ಪ್ರಕ್ರಿಯೆ ಮನಗಂಡೆ ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ 2012ರ ಸೆಪ್ಟಂಬರ್ 25 ಆದೇಶದಲ್ಲಿ ತಿಳಿಸಿದೆ. ಆದರೂ ಸಹ ಹಣಕಾಸು ಸಚಿವಾಲಯ ಸಾಲ ಮನ್ನಾ ಮಾಡಲು ಮುಂದಾಗದೇ ಕೇವಲ 11 ವರ್ಷ ಕಾಲ ಅಡಕೆ ಬೆಳೆಗಾರರ ಸಾಲ ಮರುಪಾವತಿಗೆ ಅವಕಾಶ ನೀಡಲಾಗಿದೆ ಎಂದು ಪ್ರಮಾಣಪತ್ರ ಸಲ್ಲಿಸಿದೆ.
ಈಗಾಗಲೇ ಸುಪ್ರೀಂಕೋರ್ಟ್‌ನಲ್ಲೂ ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಅರ್ಜಿ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಮುಖ್ಯಮಂತ್ರಿಗಳಿಗೆ ಅಡಿಕೆ ಬೆಳಗಾರರ ಸಾಲ ಮನ್ನಾ ಮಾಡುವಂತೆ ತಿಳಿಸಬೇಕೆಂದು ಸಚಿನ್ ಮೀಗಾ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement