ಪ್ಲಾಸ್ಟಿಕ್ ತಿಂದ ಹಸುವಿಗೆ ಶಸ್ತ್ರಚಿಕಿತ್ಸೆ
ನರಸಿಂಹರಾಜಪುರ: ಹತ್ತು ಕೆ.ಜಿ. ಪ್ಲಾಸ್ಟಿಕ್ ತಿಂದು ಪ್ರಾಣಾಪಾಯದಲ್ಲಿದ್ದ ಹಸುವನ್ನು ಪಶು ವೈದ್ಯಾಧಿಕಾರಿಗಳು ಶಸ್ತ್ರ ಚಿಕಿತ್ಸೆ ಮಾಡಿ, ಹಸುವಿನ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕ್ ಹೊರತೆಗೆದು ಹಸುವಿನ ಪ್ರಾಣ ಉಳಿಸಿದ್ದಾರೆ.
ನರಸಿಂಹರಾಜಪುರ ಪಟ್ಟಣದ ಜಿ.ಆರ್. ಮಿಲ್ ರಸ್ತೆಯ ಡಿ.ಎಂ.ನಾಗರಾಜ ಎಂಬವರ ಹಸು ಅನಾರೋಗ್ಯದಿಂದ ಬಳಲುತ್ತಿತ್ತು. ಇದನ್ನು ಪರೀಕ್ಷಿಸಿದ ಕಟ್ಟಿನಮನೆ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಡಾ. ರಾಕೇಶ್ ರಾವ್ ಹಸು ಪ್ಲಾಸ್ಟಿಕ್ ತಿಂದಿರುವುದನ್ನು ಮನಗಂಡು ರೂಮಿ ನೊಟೋಮಿ ಎಂಬ ಶಸ್ತ್ರ ಚಿಕಿತ್ಸೆ ಮಾಡಿ ಪ್ಲಾಸ್ಟಿಕ್ ಹೊರತೆಗೆದು ಹಸುವಿನ ಪ್ರಾಣ ಕಾಪಾಡಿದ್ದಾರೆ.
ಈ ಸಂದರ್ಭದಲ್ಲಿ ಡಾ. ರಾಕೇಶ್ ರಾವ್‌ಮಾತನಾಡಿ, ಪ್ಲಾಸ್ಚಿಕ್ ತಿಂದ ಹಸುವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಜೀರ್ಣವಾಗುವುದಿಲ ಹಸುವಿನ ಮಾಲೀಕರು ಜಾನುವಾರುಗಳು ಪ್ಲಾಸ್ಟಿಕ್ ತಿನ್ನದಂತೆ ಜಾಗ್ರತೆ ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಎನ್ನೆಸ್ಸೆಸ್ ಉದ್ಘಾಟನೆ
ನರಸಿಂಹರಾಜಪುರ: ಸರ್ಕಾರಿ ಪ.ಪೂ. ಕಾಲೇಜಿನ ಎನ್ನೆಸ್ಸೆಸ್‌ನ 2013-14 ನೇ ಸಾಲಿನ ಉದ್ಘಾಟನಾ ಕಾರ್ಯಕ್ರಮ ಕಾಲೇಜು ಆವರಣದಲ್ಲಿ ಶನಿವಾರ ನಡೆಯಿತು. ಶೃಂಗೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಿ. ತಿಪ್ಪೇಶಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪಠ್ಯೇತರ ಚಟುವಟಿಕೆ ಮಹತ್ವ, ವಿದ್ಯಾರ್ಥಿಗಳಿಗೆ ಇರಬೇಕಾದ ಸೇವಾ ಮನೋಭಾವ, ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವದ ಬಗ್ಗೆ ವಿವರಿಸಿದರು. ನ.ರಾ.ಪುರ ಸ.ಪ.ಪೂ. ಕಾಲೇಜಿನ ಗ್ರಂಥಪಾಲಕ ಪಿ. ಕೃಷ್ಣಪ್ಪ ಮಾತನಾಡಿ, ಎನ್ನೆಸ್ಸೆಸ್ ವಿದ್ಯಾರ್ಥಿಗಳು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡಬೇಕು ಎಂದರು. ಅಧ್ಯಕ್ಷತೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸರ್ವಮಂಗಳಮ್ಮ ವಹಿಸಿದ್ದರು. ಶ್ವೇತಾ ಪ್ರಾರ್ಥಿಸಿದರು. ಎನ್ನೆಸ್ಸೆಸ್ ಅಧಿಕಾರಿ ಬಿ.ಪಿ.ಕುಮಾರ್ ಸ್ವಾಗತಿಸಿದರು.