ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅತ್ಯಾಚಾರ; 10 ವರ್ಷ ಕಠಿಣ ಸಜೆ

Lingaraj Badiger
Updated On : 6 Aug 2013, 10:55 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಆ.5
ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಹಾಗೂ 30 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ.
ಧರಗುಣಿ ಗ್ರಾಮದ ಬಾಲಕಿ ಹಳ್ಳದಲ್ಲಿ ಕುರಿ ಮೇಯಿಸುತ್ತಿದ್ದ ಸಮಯದಲ್ಲಿ ಅದೇ ಊರಿನ ವಾಸಿಗಳಾದ ರಾಮ ಹಾಗೂ ಕೃಷ್ಣ ಪುಸಲಾಯಿಸಿ ಧರಗುಣಿ ಸಮೀಪದ ಹಿರೇಕೊಳಲೆ ಗ್ರಾಮದ ಧನರಾಜ್ ಜೈನ್ ಎಂಬವರ ತೋಟದಲ್ಲಿ ಅತ್ಯಾಚಾರ ಮಾಡಿ, ಬಳಿಕ ಅದೇ ಊರಿನ ವಾಸಿಯಾದ ಮಂಜುನಾಥ ಆಕೆಯ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಪುಸಲಾಯಿಸಿ ಆತನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಗರ್ಭಿಣಿಯಾಗಲು ಕಾರಣರಾದ ಹಿನ್ನೆಲೆ ಚಿಕ್ಕಮಗಳೂರು ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಎ. ಪಾಟೀಲ್ ಅವರು ಪ್ರಕರಣ ಸಾಬಿತಾದ ಹಿನ್ನೆಲೆ ಆರೋಪಿಗಳಾದ ರಾಮ, ಕೃಷ್ಣ ಹಾಗೂ ಮಂಜುನಾಥನಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 10 ಸಾವಿರ ರು. ದಂಡ ವಿಧಿಸಿದ್ದು, ದಂಡದ ಮೊತ್ತದಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿಗೆ 25 ಸಾವಿರ ರು. ಪರಿಹಾರವಾಗಿ ನೀಡುವಂತೆ ಹಾಗೂ ಉಳಿದ 5 ಸಾವಿರ ರು. ಹಣವನ್ನು ಸರ್ಕಾರಕ್ಕೆ ಜಮಾ ಮಾಡುವಂತೆ ಸೋಮವಾರ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿ.ಆರ್. ಉಪಾಧ್ಯೆ ಪ್ರಕರಣ ನಡೆಸಿದ್ದರು.
ಕಳ್ಳತನ: ದಂಡ
ಚಿಕ್ಕಮಗಳೂರು: ಬಟ್ಟೆ ಕಳ್ಳತನ ಮಾಡಿದ ಆರೋಪಿಗಳಿಗೆ ಹಿರಿಯ ಸಿವಿಲ್ ನ್ಯಾಯಾಲಯ ದಂಡ ವಿಧಿಸಿ ತೀರ್ಪು ನೀಡಿದೆ.
ನಗರದ ಎಂ.ಜಿ. ರಸ್ತೆಯ ಮೋಹನ್ ಷೋ ರೂಂ ಬಟ್ಟೆ ಅಂಗಡಿಯಲ್ಲಿ ಮುಮ್ತಾಜ್, ನೂರ್ ಜಾನ್, ಖಾಸಿ, ನೂರಬಿ, ರಾಜಮಾ ಎಂಬವರು ಬಟ್ಟೆಕೊಂಡು ಕೊಳ್ಳುವ ನೆಪದಲ್ಲಿ ಅಂಗಡಿಗೆ ಬಂದು ಸೀರೆ ಮತ್ತು ಚೂಡಿದಾರ್‌ಗಳನ್ನು ಕೊಂಡು ಕೊಳ್ಳುವ ಸಲುವಾಗಿ ನೋಡುತ್ತಿದ್ದು ಅವುಗಳಲ್ಲಿ 7 ಸೀರೆ ಮತ್ತು 3 ಚೂಡಿದಾರ್ ಸೆಟ್‌ಗಳನ್ನು ಕಳ್ಳತನ ಮಾಡಿದ ಹಿನ್ನೆಲೆಯಲ್ಲಿ ನಗರ ಠಾಣಾ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಮಹದೇವಯ್ಯ ಅವರು ಆರೋಪ ಸಾಬೀತಾದ ಹಿನ್ನೆಲೆ ಮುಮ್ತಾಜ್ ನೂರ್‌ಜಾನ್, ಖಾಸಿ, ನೂರಬಿ, ರಾಜಮಾ ಎಂಬ ಆರೋಪಿಗಳಿಗೆ ತಲಾ ಒಂದು ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಎಂ. ಸಾವಿತ್ರಿ ಮೊಕದ್ದಮೆ ನಡೆಸಿದ್ದರು.
ಯುವತಿಯರು ನಾಪತ್ತೆ
ಮೂಡಿಗೆರೆಯ ಮುಗ್ರವಳ್ಳಿ ಗ್ರಾಮದ ಪ್ರಮೀಳ (16) ಹಾಗೂ ಅಶ್ವಿತ (14)  ಎಂಬ ಯುವತಿಯರು ನಾಪತ್ತೆಯಾಗಿರುವ ಬಗ್ಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜು.28ರಂದು ಮನೆಯಿಂದ ಹೋದವರು ವಾಪಸ್ ಬಂದಿರುವುದಿಲ್ಲ. ಇವರ ಮಾಹಿತಿ ದೊರೆತಲ್ಲಿ ಮೂಡಿಗೆರೆ ಠಾಣೆಗೆ ನೀಡಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement