ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಎದೆ ಹಾಲಿನಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ'

Lingaraj Badiger
Updated On : 6 Aug 2013, 11:01 am

ನರಸಿಂಹರಾಜಪುರ: ಮಗುವಿಗೆ ಎರಡು ವರ್ಷದವರೆಗೂ ಎದೆಹಾಲು ನೀಡುವುದರಿಂದ ಸ್ತನ ಕ್ಯಾನ್ಸರ್‌ನಿಂದ ಪಾರಾಗಬಹುದು ಎಂದು  ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಲಲಿತ ತಿಳಿಸಿದರು.
ಪಟ್ಟಣದ ರಾಜೀವ ನಗರದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.
ಮಗು ಹುಟ್ಟಿದ ಅರ್ಧಗಂಟೆಯೊಳಗೆ ಎದೆ ಹಾಲನ್ನು ನೀಡಬೇಕು. ಒಂದು ವರ್ಷದೊಳಗಿನ ಮಕ್ಕಳಿಗೆ ಎದೆಹಾಲು ಕೊಡುವುದರಿಂದ ರೋಗ ನಿರೋದಕ ಶಕ್ತಿ ಹೆಚ್ಚಾಗಿ ಸೋಂಕು ರೋಗಗಳನ್ನು ತಡೆಗಟ್ಟಬಹುದು. ಗರ್ಭಿಣಿ ಅವಧಿಯಲ್ಲಿ ಮಹಿಳೆಯು ಹೆಚ್ಚಾಗಿ ಪೌಷ್ಟಿಕ ಆಹಾರ ಸೇವಿಸಬೇಕು.
 ಸೊಪ್ಪು, ತರಕಾರಿ, ಪಪ್ಪಾಯಿ ಹಾಗೂ ಬಾಳೆಹಣ್ಣನ್ನು ಹೆಚ್ಚಾಗಿ ಸೇವಿಸಬೇಕು. ಮಗುವಿಗೆ ಕನಿಷ್ಠ 6 ತಿಂಗಳವರೆಗೆ ತಾಯಿಯು ಎದೆ ಹಾಲನ್ನು ನೀಡಬೇಕು ಎಂದು ಸಲಹೆ ನೀಡಿದರು.
ಅಂಗನವಾಡಿ ಮೇಲ್ವಿಚಾರಕಿ ಬಂಗಾರಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿವರ್ಷ ಆ.1ರಿಂದ 7ರ ವರೆಗೆ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತಿದೆ. ತಾಯಂದಿರಿಗೆ ಎದೆ ಹಾಲಿನ ಮಹತ್ವ ತಿಳಿಸುವುದು ಇದರ ಉದ್ದೇಶವಾಗಿದೆ. ಮಕ್ಕಳಿಗೆ ಅಪೌಷ್ಟಿಕತೆ ತಡೆಗಟ್ಟಲು ಸರ್ಕಾರವು ವಾರದಲ್ಲಿ 3 ದಿನ ಮಕ್ಕಳಿಗೆ ಹಾಲು ವಿತರಿಸುವ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದೆ ಎಂದರು.
ರಾಜೀವ್ ನಗರದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಜುಬೇದಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಮಕ್ಕಳಿಗೆ ತಾಯಿಯು ಎದೆ ಹಾಲನ್ನು ಕೊಡುವ ಪ್ರವೃತ್ತಿ ಕಡಿಮೆಯಾಗುತ್ತಿದೆ.
ಬಾಟಲಿ ಹಾಲು ಕೊಡುವುವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಎದೆ ಹಾಲಿನ ಮಹತ್ವ ತಿಳಿಸುವ ಸ್ತನ್ಯ ಪಾನ ಸಪ್ತಾಹವು ಉಪಯೋಗವಾಗಲಿದೆ ಎಂದರು.
ಸಭೆಯಲ್ಲಿ ಕಿಶೋರಿಯರ ಸಂಘದ ಅಧ್ಯಕ್ಷೆ ನಾಗಲತಾ, ಅಂಗನವಾಡಿ ಶಿಕ್ಷಕಿ ಶಿವರತ್ನ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement