ಚಿರತೆ ಪ್ರತ್ಯಕ್ಷ: ಭೀತಿಯಲ್ಲಿ ಗ್ರಾಮಸ್ಥರು
ಕಡೂರು: ತಾಲೂಕಿನ ವೈ.ಮಲ್ಲಾಪುರ ಗ್ರಾಮದಲ್ಲಿ ಚಿರತೆಯೊಂದು ಕಾಣಿಸಿಕೊಂಡ ಪರಿಣಾಮ ಗ್ರಾಮಸ್ಥರು ಭಯ ಭೀತಿಯಿಂದ ಓಡಾಡುವ ಪರಿಸ್ಥಿತಿ ಉಂಟಾಗಿದೆ.
ವೈ. ಮಲ್ಲಾಪುರ ಗ್ರಾಮದ ಊರಿನಿಂದ ನೂರು ಮೀಟರ್ ದೂರದಲ್ಲಿ ಹರಿಯುವ ವೇದಾನದಿ ಪಾತ್ರದ ಆಹುತಿ ಹಳ್ಳದ ಸಮೀಪದಲ್ಲಿ ಬಳ್ಳಾರಿ ಜಾಲಿ ಮತ್ತು ಗಿಡ ಗೆಂಟೆಗಳು ಬೆಳೆದಿದೆ.
ಸೋಮವಾರ ಬೆಳಿಗ್ಗೆ ಹಳ್ಳದ ಪಕ್ಕದಲ್ಲಿ ಮಲ್ಲಾಪುರ ಗ್ರಾಮದ ಕಲ್ಲೇಶ್ ಎಂಬ ಯುವಕನು ತೋಟದಿಂದ ಮನೆಗೆ ವಾಪಸ್ ಬರುವಾಗ ಚಿರತೆಯು ನಾಯಿಯೊಂದನ್ನು ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿರುವುದನ್ನು ಕಂಡು ಭಯಗೊಂಡು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದರಿಂದ ಇಡೀ ಗ್ರಾಮವೇ ಭಯದ ವಾತಾವರಣಲ್ಲಿ ಮುಳುಗಿದೆ.
ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಊರಿನಲ್ಲಿ ಟಾಂ ಟಾಂ ಹಾಕಿಸುವ ಮೂಲಕ ಜನರು ಸಂಜೆ ವೇಳೆ ಒಂಟಿಯಾಗಿ ಮನೆಯಿಂದ ಹೊರಗೆ ಓಡಾಡಾದಂತೆ ಮತ್ತು ಒಂಟಿಯಾಗಿ ದನಕರುಗಳನ್ನು ಮೇಯಿಸಲು ಹೋಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆಗೆ ವಿಷಯ ತಿಳಿಸಿದಾಗ ಅರಣ್ಯ ಇಲಾಖೆಯ ಸಿಬ್ಬಂದಿ ಬಂದು ಹಳ್ಳದ ಸುತ್ತಮುತ್ತ ಪರಿಶೀಲನೆ ನಡೆಸಿ ವಾಪಸಾಗಿದ್ದಾರೆ.