ಕಾಡಾನೆ ದಾಳಿ; ಬೆಳೆ ನಾಶ
ಕ.ಪ್ರ.ವಾರ್ತೆ, ಮೂಡಿಗೆರೆ, ಆ.6
ತಾಲೂಕಿನಲ್ಲಿ ಬಿಡದೆ ಸುರಿಯುತ್ತಿರುವ ಮಳೆಯಿಂದ ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗಿ ಕೈಗೆ ಬಂದ ಫಸಲು ಬಾಯಿಗೆ ಬಾರದಂತಾಗಿದೆ. ಮತ್ತೊಂದೆಡೆ ಕಾಡಾನೆಗಳು ಗದ್ದೆ ತೋಟಗಳ ಮೇಲೆ ದಾಳಿ ನಡೆಸಿ ಬೆಳೆಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಿವೆ.
ಸಕಲೇಶಪುರದಿಂದ ಆಗಮಿಸಿದ ಗಜಪಡೆ ಜೇನುಬೈಲಿನ ಹಿರಣ್ಣಯ್ಯ ಎಂಬವರ ತೋಟಕ್ಕೆ ಲಗ್ಗೆ ಇಟ್ಟು ಕಾಫಿ, ಅಡಕೆ, ಮೆಣಸು ಸೇರಿದಂತೆ ಇತರೆ ಬೆಳೆಗಳು ಹಾಳು ಗೆಡವಿ ಲಕ್ಷಾಂತರ ರು. ನಷ್ಟವನ್ನುಂಟುಮಾಡಿವೆ. ಕಳೆದ 3 ವರ್ಷಗಳಿಂದ ಮೂವರನ್ನು ಬಲಿ ತೆಗೆದು ಕೊಂಡು ಹಲವರನ್ನು ಗಾಯ ಗೊಳಿಸಿ ತಿರುಗುತ್ತಿರುವ
ಒಂಟಿ ಸಲಗ, ಅ.6 ರ ಬೆಳಿಗ್ಗೆ ಬಿದರಹಳ್ಳಿ ಜಯರಾಮ್, ಬಿ.ಎಂ. ಚಂದ್ರೇಗೌಡ, ಎಚ್.ಕೆ. ಜಗದೀಶ್ ಮತ್ತು ಕೆಂಜಿಗೆ ಕೇಶವ ಅವರ ತೋಟಗಳಿಗೆ ಲಗ್ಗೆ ಇಟ್ಟು ಕಾಫಿ, ಅಡಕೆ, ಬಾಳೆಯನ್ನು ನಾಶ ಗೊಳಿಸಿವೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಲಗವನ್ನು ಕಂಡು ಓಡಿ ಹೋಗಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.
ಬೆಳೆಗಾರ ಬಿ.ಎಸ್. ಜಯರಾಮ್ ಮಾತನಾಡಿ, ಒಂಟಿ ಸಲಗವನ್ನು ಹಿಡಿಯಲು ಮೂಡಿಗೆರೆ ಅರಣ್ಯ ಇಲಾಖೆ ವಿಫಲವಾಗಿದ್ದು, ರಾಜ್ಯ ಸರ್ಕಾರ ಆನೆಗಳ ಹಾವಳಿಯಿಂದ ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.