ಜೀವನೋತ್ಸಾಹ ಬತ್ತಬಾರದು
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಆ.6
ಬದುಕನ್ನು ಗೆದ್ದರೆ ಸಾವು ಸೋಲುತ್ತದೆ. ತಾನೂ ಬದುಕಿ ಮತ್ತೊಬ್ಬರನ್ನು ಬದುಕಿಸುವುದೇ ಸಾರ್ಥಕ ಬದುಕು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಟ್ನಳ್ಳಿ ಮಹೇಶ್ ಹೇಳಿದ್ದಾರೆ.
ಸಖರಾಯಪಟ್ಟಣ ಹೋಬಳಿ ಬಿಸಲೇಹಳ್ಳಿಯ ಸಮುದಾಯ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಬಿ.ಎಸ್. ಚಿಕ್ಕಬಸಪ್ಪ ಮತ್ತು ಮಿಲಿಟರಿ ರಾಜಣ್ಣ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಹಾ ಕಾವ್ಯಕ್ಕಿಂತ ಮಹಾ ಬದುಕು ದೊಡ್ಡದು. ನಮ್ಮೊಳಗಿನ ಜೀವನೋತ್ಸಾಹ ಬತ್ತಬಾರದು. ಬದುಕಿನ ಎಲ್ಲ ಕ್ಷೇತ್ರವನ್ನು ವಚನಕಾರರು ವ್ಯಾಪಿಸಿದ್ದಾರೆ.
ಹುಟ್ಟುವಾಗ ಉಸಿರುತ್ತದೆ ಹೆಸರಿರುವುದಿಲ್ಲ, ಆದರೆ, ಸಾಯುವಾಗ ಉಸಿರಿರಲ್ಲ ಆದರೆ ಹೆಸರಿರಬೇಕು. ಬದುಕಿನ ರೀತಿ, ಗಳಿಸಿದ ಪ್ರೀತಿ, ಉಳಿಸಿದ ನೀತಿ ಮುಖ್ಯವಾಗಬೇಕು. ಲೋಕಾನುಭವದಿಂದ ಒಳಿತನ್ನು ಕಲಿಯಬೇಕು. ಸಜ್ಜನರ ಸಹವಾಸ ಗಳಿಸಬೇಕು. ದೇವರಾಗಿ ಹುಟ್ಟಿದವರು ಬೆಳೆಯುತ್ತ ಪ್ರಾಪಂಚಿಕ ಜ್ಞಾನ ಅಲ್ಪರನ್ನಾಗಿಸುತ್ತದೆ. ಅಲ್ಪರನ್ನು ಒಳ್ಳೆಯ ಮಾನವರಾಗಿಸಲು ನೀಡುವ ಶಿಕ್ಷಣವೇ ವಚನ ಸಾಹಿತ್ಯವೆಂದು ಬಣ್ಣಿಸಿದರು.
ಕಾಲದ ಹೊಡೆತವನ್ನು ಮೀರಿ ನಿಂತಿರುವ ಕನ್ನಡದ ಸ್ವತ್ತು ವಚನ ಸಾಹಿತ್ಯ. ಏಕದೇವೋಪಾಸನೆ ಇದೆ. ಇಷ್ಟ ದೇವ ಪ್ರಜ್ಞೆ ಇತ್ತು. ಪ್ರಶ್ನೆಸುವ ಮನೋಭಾವ ಇತ್ತು ಎಂದ ಚಟ್ನಳ್ಳಿ ಮಹೇಶ್, ವಚನ ಸಾಹಿತ್ಯದಿಂದ ಪ್ರೇರಿತರಾದ ನಿಜ ಶರಣರಾದ ಚಿಕ್ಕಬಸಪ್ಪ ಮನೆಗೆದ್ದು ಮಾರುಗೆದ್ದವರು. ಈಶ ಸೇವೆಗಿಂತ ದೇಶಸೇವೆ ಪ್ರಧಾನ ಎಂದು ಭಾವಿಸಿದ ರಾಜಣ್ಣ, ಈ ಭಾಗದ ಪ್ರಥಮ ಯೋಧ. ನಿವೃತ್ತಿಯ ನಂತರ ಕೃಷಿಯಲ್ಲಿ ತೊಡಗಿ ಯುವಕರನ್ನು ಪ್ರೇರೇಪಿಸುತ್ತಿದ್ದವರೆಂದು ಹೇಳಿದರು.
ಶಿಕ್ಷಕ ಗಂಗಾಧರ ಶಿವಪುರ ವಿಶೇಷ ಉಪನ್ಯಾಸ ನೀಡಿ, ಎಲ್ಲ ವರ್ಗದವರನ್ನೂ ಒಳಗೊಂಡ ವಚನ ಸಾಹಿತ್ಯ ಅಪಾರ ಜ್ಞಾನದನಿಧಿ. ಸರಳವಾದ ಮಾತುಗಳಲ್ಲಿ ಜೀವನವನ್ನು ಅರ್ಥಮಾಡಿಸುತ್ತದೆ. ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಸಪ್ತಶೀಲಸೂತ್ರಗಳು ಸಹಕಾರಿ. ವಚನ ಪಿತಾಮಹಾ ಫ.ಗು. ಹಳಕಟ್ಟಿ ಅವರ ಪರಿಶ್ರಮದಿಂದ ವಚನ ಸಾಹಿತ್ಯ ಲಭ್ಯವಾಗುತ್ತಿದೆ ಎಂದರು.
ನರೇಂದ್ರ ಪ್ರೌಢಶಾಲಾ ಸಲಹಾ ಸಮಿತಿ ಅಧ್ಯಕ್ಷ ಬಸವರಾಜಪ್ಪ ಮಾತನಾಡಿದರು. ಕಡೂರು ತಾಪಂ ಮಾಜಿ ಅಧ್ಯಕ್ಷ ಚಂದ್ರಮೌಳಿ, ಪರಮೇಶ್ವರಪ್ಪ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ಶ.ಸಾ.ಪ. ಸದಸ್ಯೆ ಭಾರತೀ ಶಿವರುದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿ.ಸ. ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಸಿದರು.