19, ಜಿಪಂ ಸಭೆ
ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಸರ್ವ ಸದಸ್ಯರ ಸಾಮಾನ್ಯ ಸಭೆಯು ಆ. 19ರಂದು ಬೆಳಗ್ಗೆ 11.30ಕ್ಕೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ.ಎಸ್. ರೇಖಾ ಹುಲಿಯಪ್ಪಗೌಡ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಪ್ಲಾಸ್ಟಿಕ್ ಬಳಕೆ: ದಂಡ ಎಚ್ಚರಿಕೆ
ನಗರದಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕ್ಯಾಂಟೀನ್, ಹೋಟೆಲ್, ದಿನಸಿ ಅಂಗಡಿ ಮತ್ತು ಇತರೆ ಉದ್ದಿಮೆ ಮಾಲೀಕರು ಸಾರ್ವಜನಿಕರಿಗೆ ನಿಷೇಧಿತ ಪ್ಲಾಸ್ಟಿಕ್ ಚೀಲಗಳಲ್ಲಿ ಪದಾರ್ಥಗಳನ್ನು ಕಟ್ಟಿಕೊಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ನಿಷೇಧಿತ ಪ್ಲಾಸ್ಟಿಕ್ ಬಳಕೆ ಕಂಡುಬಂದಲ್ಲಿ ಸಂಬಂಧಪಟ್ಟ ಮಾಲೀಕರಿಗೆ ರು. 5 ಸಾವಿರವರೆಗೆ ಸ್ಥಳದಲ್ಲಿಯೇ ದಂಡ ವಿಧಿಸಲಾಗುವುದು ಹಾಗೂ ಅಂತಹ ಮಾಲೀಕರ ಉದ್ದಿಮೆಗಳ ಪರವಾನಗಿ ರದ್ದುಪಡಿಸಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯೋಧರ ಹತ್ಯೆಗೆ ಎಬಿವಿಪಿ ಖಂಡನೆ
ಶೃಂಗೇರಿ: ಪಾಕಿಸ್ತಾನಿ ಪಡೆಗಳು ಸೋಮವಾರ ನಡುರಾತ್ರಿ ಜಮ್ಮು ಕಾಶ್ಮೀರದ ನಿಯಂತ್ರಣ ರೇಖೆ ದಾಟಿ ನುಸುಳಿ ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸಿ ಐವರು ಯೋಧರನ್ನು ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆ ಕಾರ್ಯಕರ್ತರು ಬುಧವಾರ ಪಟ್ಟಣದ ಪುರದ್ವಾರ ಬಳಿ ಮಾನವ ಸರಪಳಿ ರಚಿಸಿ ಖಂಡಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಇದೊಂದು ಅಮಾನವೀಯ ಕೃತ್ಯವಾಗಿದ್ದು, ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಚೆಸ್: ರಾಜ್ಯ ಮಟ್ಟಕ್ಕೆ ಆಯ್ಕೆ
ಶೃಂಗೇರಿ: ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾಮಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಚೆಸ್ ಪಂದ್ಯಾವಳಿಯಲ್ಲಿ ತಾಲೂಕಿನ ಕೂತಗೋಡು ಪಂಚಾಯಿತಿ ತೆಕ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸುಮಾ ಕೆ. ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಕೆಯ ಸಾಧನೆಗೆ ಶಾಲಾ ಮುಖ್ಯೋಪಾದ್ಯಾಯರು, ಬೋಧಕ ಬೋಧಕೇತರ ವರ್ಗ, ಪೋಷಕರು ಅಭಿನಂದಿಸಿದ್ದಾರೆ.