ಅಭಿವೃದ್ಧಿಗೆ ರು. 50 ಲಕ್ಷ ಮಂಜೂರು
ಕ.ಪ್ರ.ವಾರ್ತೆ , ಕಡೂರು , ಆ.7
ಕಡೂರು ವಿಧಾನಸಭಾ ಕ್ಷೇತ್ರದ ಕೆ.ಬಿದರೆ ಗ್ರಾಮದ ಆಯರ್ವೇದಿಕ್ ಆಸ್ಪತ್ರೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ಕ್ಷೇತ್ರದ ಗೊಲ್ಲರಹಟ್ಟಿಗಳ ಪ್ರಸೂತಿ ಗೃಹ ನಿರ್ಮಾಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ರು. 50ಲಕ್ಷ ಮಂಜೂರಾಗಲಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಅವರು ಕಡೂರು ಕ್ಷೇತ್ರದ ಸಿಂಗಟಗೆರೆ ಹೋಬಳಿ ಕೆ. ಬಿದರೆ, ಬಿದರೆ ಹೊಲ್ಲಹಟ್ಟಿ, ಬೊಮ್ಮೇನಹಳ್ಳಿ, ಬಿ. ಮಲ್ಲೇನಹಳ್ಳಿ, ಕಂಚುಗಲ್ಲು, ಶೆಟ್ಟಿಹಳ್ಳಿ, ಎಂ.ಎಲ್. ತಾಂಡ್ಯ, ಮುತ್ತಾಣೆಗೆರೆ ಮತ್ತು ಅಣೇಗೆರೆಗಳಲ್ಲಿ ಮತದಾರರಿಗೆ ಕೃತಜ್ಞತೆ ಅರ್ಪಿಸಿ, ಕಂದಾಯ ಅಧಿಕಾರಿಗಳೊಂದಿಗೆ ಜನರ ಸಮಸ್ಯೆ ಅಲಿಸಿ ಮಾತನಾಡಿದರು.
ಶೀಘ್ರ ಮಂಜೂರು: ಗ್ರಾಮಸ್ಥರು ನೀಡಿರುವ ಮನವಿಯಂತೆ ಕೆ.ಬಿದರೆ ದೊಡ್ಡ ಮಠದ ಅಭಿವೃದ್ಧಿಗೆ ಕಂಕಣ ಬದ್ದನಾಗಿದ್ದೇನೆ. ಕೆ.ಬಿದರೆಯಿಂದ ದೊಡ್ಡಪ್ಪನಹಳ್ಳಿ ಮಾರ್ಗವಾಗಿ ಗಿರಿ ತಿಮ್ಲಾಪುರದವರೆಗೆ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಮಂಜೂರಾಗಲಿದೆ ಎಂದರು.
ಗ್ರಾಮದ ಆಯರ್ವೇದಿಕ್ ಆಸ್ಪತ್ರೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಹೊಸ ಕಾಲೇಜು ಆರಂಭದ ಪ್ರಕ್ರಿಯೆ ಸಂದರ್ಭದಲ್ಲಿ ಕೆ.ಬಿದರೆ ಗ್ರಾಮಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ತರುತ್ತೇನೆ ಎಂದರು.
ಗೊಲ್ಲಹಟ್ಟಿ ಅಭಿವೃದ್ಧಿ: ಕೆ. ಗೊಲ್ಲರಹಟ್ಟಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನನ್ನ ಕಡೂರು ಕ್ಷೇತ್ರದಲ್ಲಿ ಸುಮಾರು 15 ಗೊಲ್ಲರ ಹಟ್ಟಿಗಳಿದ್ದು, ಅದರ ಅಭಿವೃದ್ಧಿಗೆ ಸಚಿವ ಆಂಜನೇಯರವರಲ್ಲಿ ರು. 75 ಲಕ್ಷ ಪ್ರಸ್ತಾವನೆ ನೀಡಿದ್ದು, ಸಚಿವರು ರು. 50 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಗೊಲ್ಲರಹಟ್ಟಿ ಪ್ರಸೂತಿ ಆರೈಕೆ ಗೃಹ ನಿರ್ಮಾಣಕ್ಕೆ ತಲಾ ರು. 3 ಲಕ್ಷ ನೀಡಲಾಗುವುದು. ಶಿವಗಂಗಾ ಗಿರಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಬಿ. ಬಸವನಹಳ್ಳಿಯ ಬೋವಿ ಕಾಲೋನಿಗೆ ವ್ಯಾಯಾಮ ಶಾಲೆ ತಾಂಡ್ಯದ ದೇವಾಲಯ ನಿರ್ಮಾಣಕ್ಕೆ ರು. 6 ಲಕ್ಷ ನೀಡುತ್ತೇನೆ ಎಂದರು.
ಕೆ. ಬಿದರೆ ದೊಡ್ಡಮಠದ ಪ್ರಭುಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ತಿಮ್ಮಯ್ಯ, ಜೆಡಿಎಸ್ ಮುಖಂಡ ಜಗದೀಶ್ ಕುಮಾರ್, ಗೊಲ್ಲರಹಟ್ಟಿ ನಾಗರಾಜ್, ಗೋಪಿ, ಸಕ್ರಾನಾಯ್ಕ, ಚಂದ್ರನಾಯ್ಕ, ಕೆ. ಬಿದರೆ ಗ್ರಾಪಂ ಅಧ್ಯಕ್ಷ ರಮೇಶ್, ಕಂದಾಯ ಇಲಾಖೆ ಅಧಿಕಾರಿ ದೇವರಾಜ್, ರವಿ, ಓಂಕಾರಪ್ಪ ಮೊದಲಾದವರು ಉಪಸ್ಥಿತರಿದ್ದರು.