ಉದ್ಯೋಗ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ
ಕ.ಪ್ರ.ವಾರ್ತೆ , ಚಿಕ್ಕಮಗಳೂರು , ಆ.7
ಆಧುನಿಕ ಯುಗದಲ್ಲಿ ಮಹಿಳೆಯು ಕೂಡ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉದ್ಯೋಗ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ತಾಪಂ ಅಧ್ಯಕ್ಷ ಬಸವರಾಜು ಹೇಳಿದ್ದಾರೆ.
ನಗರದ ಬಾಲ ಭವನದಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಮಹಿಳೆಯ ಆರ್ಥಿಕ ಸಬಲೀಕರಣಕ್ಕೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇದರ ಪ್ರಯೋಜನವನ್ನು ವಿದ್ಯಾವಂತ ಮಹಿಳೆಯರು ಪಡೆದುಕೊಳ್ಳಬೇಕು ಎಂದರು. ತರಬೇತಿ ಪಡೆದ ಮಹಿಳೆಯರು ಕಂಪ್ಯೂಟರ್ ನೆರವಿನಿಂದ ಸ್ವ ಉದ್ಯೋಗ ಸೃಷ್ಟಿಸಿಕೊಂಡು ಆರ್ಥಿಕ ಸಂಪನ್ಮೂಲ ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದರು.
ಸದ್ಬಳಕೆ ಆಗಲಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರಯ್ಯ ಮಾತನಾಡಿ, ಶಿಬಿರಾರ್ಥಿಗಳು ಕಂಪ್ಯೂಟರ್ ಕೌಶಲ್ಯವನ್ನು ಹೊಂದುವುದರ ಜೊತೆಗೆ ಮುಂದಿನ ದಿನಗಳಲ್ಲಿ ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದರು. ವಾರ್ತಾಧಿಕಾರಿ ಬಿ. ಮಂಜುನಾಥ್ ಮಾತನಾಡಿ, ಗಣಕಯಂತ್ರದ ಬಳಕೆಯ ಜ್ಞಾನ ಹೊಂದಿರುವುದರಿಂದ ವೃತ್ತಿ ಜೀವನ ಹಾಗೂ ಸ್ಪರ್ಧಾ ಪರೀಕ್ಷೆಗೆ ಅನುಕೂಲವಾಗಲಿದೆ ಎಂದರು.
ರಚಿತಾ ಮಹಿಳಾ ಸಮಾಜದ ಅಧ್ಯಕ್ಷೆ ಕವಿತಾ ಗೋಪಾಲ್, ಎಸ್.ಡಿ.ಆರ್. ತರಬೇತಿ ಸಂಸ್ಥೆಯ ಚೇತನ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗೌರಿ ಕಾಲುವೆಯ ಸ್ತ್ರೀ ಶಕ್ತಿ ಸಂಘದವರಿಗೆ ಕಿರುಸಾಲ ಯೋಜನೆಯ ಒಂದು ಲಕ್ಷ ರು. ಗಳ ಚೆಕ್ ವಿತರಣೆ ಮಾಡಲಾಯಿತು. ಪವಿತ್ರ ಸ್ವಾಗತಿಸಿದರು, ಸತ್ಯನಾರಾಯಣ್ ವಂದಿಸಿದರು.