12ರಂದು ಗ್ರಾಮ ಸಹಾಯಕರ ಬೃಹತ್ ರ್ಯಾಲಿ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಆ.8
ಕಂದಾಯ ಇಲಾಖೆ ಗ್ರಾಮ ಸಹಾಯಕರ ಬೃಹತ್ ರ್ಯಾಲಿ ಆ.12 ರಂದು ತುಮಕೂರಿನಲ್ಲಿ ನಡೆಯಲಿದ್ದು ಜಿಲ್ಲೆಯ ಎಲ್ಲ ಗ್ರಾಮ ಸಹಾಯಕರು ಭಾಗವಹಿಸುವಂತೆ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ತಿಳಿಸಿದ್ದಾರೆ.
ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘ ಹಮ್ಮಿಕೊಂಡಿರುವ ರ್ಯಾಲಿಯಲ್ಲಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕ ಹುದ್ದೆಯನ್ನು ಡಿ ದರ್ಜೆಗೆ ಸೇರಿಸಿ ಸೇವಾ ಭದ್ರತೆ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು ಸೇರಿದಂತೆ 13 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಮಂದಿ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳಲಿದ್ದು ಅಂದು ಬೆಳಿಗ್ಗೆ 10.30 ಕ್ಕೆ ಸಿದ್ದಗಂಗಾ ಮಠದಿಂದ ರ್ಯಾಲಿ ಆರಂಭವಾಗಲಿದೆ. ಸಂಘದ ರಾಜ್ಯಾಧ್ಯಕ್ಷ ಮುದ್ದುಕೃಷ್ಣ , ವಾಲ್ಮೀಕಿ ಸಂಘದ ರಾಜ್ಯಾಧ್ಯಕ್ಷ ವಿ. ಪ್ರತಾಪ ಮದಕರಿ, ಮಾದಿಗ ದಂಡೋರದ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್ ನೇತೃತ್ವದಲ್ಲಿ ನಡೆಯುವ ಈ ರ್ಯಾಲಿಯಲ್ಲಿ ಜಿಲ್ಲೆಯ ಎಲ್ಲಾ ಸದಸ್ಯರು ಪಾಲ್ಗೊಂಡು ಯಶಸ್ಸಿಗೆ ಸಹಕರಿಸುವಂತೆ ಜಗದೀಶ್ ಮನವಿ ಮಾಡಿದ್ದಾರೆ.