ಅನುಮಾನಸ್ಪದವಾಗಿ ವಿದ್ಯಾರ್ಥಿ ಸಾವು
ಕ.ಪ್ರ.ವಾರ್ತೆ ಕೊಪ್ಪ ಆ.8
ಅನುಮಾನಸ್ಪದವಾಗಿ ಸಾವನ್ನಪ್ಪಿದ ಕಾಲೇಜು ವಿದ್ಯಾರ್ಥಿಯ ಶವ ಗುರುವಾರ ಬೆಳಿಗ್ಗೆ ಇಲ್ಲಿನ ಕೆಸುವೆ ರಸ್ತೆಯ ಬಳಿಯ ಮುಸರೇಹಳ್ಳದಲ್ಲಿ ಪತ್ತೆಯಾಗಿದೆ.
ಮೃತ ವಿದ್ಯಾರ್ಥಿ ಹರಿಹರಪುರದ ಅ.ರ.ಸ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶ್ರೀವತ್ಸ (17) ಎಂದು ಗುರುತಿಸಲಾಗಿದೆ. ಈತ ಬುಧವಾರ ಸಂಜೆಯಿಂದ ಕಾಣೆಯಾಗಿದ್ದಾನೆ ಎನ್ನಲಾಗಿದೆ. ಬುಧವಾರ ಇಲ್ಲಿನ ಚಿಟ್ಟೇಮಕ್ಕಿ ಮುಸುರೇಹಳ್ಳದ ಸೇತುವೆ ಬಳಿ ಇರುವ ಕಲ್ಲು ಬಂಡೆಗಳ ಮೇಲೆ ತನ್ನ ಸ್ನೇಹಿತರೊಂದಿಗೆ ಮಾದಕ ವಸ್ತು ಸೇವನೆ ಅತಿಯಾಗಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಹಿಂದೆ ಹಲವು ಬಾರಿ ಹುಡುಗರ ಗುಂಪುಗಳು ಇಲ್ಲಿಗೆ ಬಂದು ಈ ರೀತಿಯಾಗಿ ಮಾದಕ ವಸ್ತುಗಳನ್ನು ಸೇವನೆ ಮಾಡಿ ಅಮಲಿನಿಂದ ವರ್ತಿಸಿದ್ದರು ಎಂದು ಪೊಲೀಸರಿಗೆ ಹಲವು ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಮಾಹಿತಿಯ ಹಿನ್ನಲೆಯಲ್ಲಿ ಮೃತ ಯುವಕನ ಗೆಳೆಯರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪಿಎಸ್ಐ ಗಾವಿರಾಜ್ ತಿಳಿಸಿದ್ದು, ತನಿಖೆ ಮುಂದುವರೆಸುತ್ತಿದ್ದಾರೆ.