ಅರಣ್ಯ ಸಿಬ್ಬಂದಿ, ಗ್ರಾಮಸ್ಥರ ಹೈಕೈ
ಕ.ಪ್ರ.ವಾರ್ತೆ ಕಡೂರು ಆ.8
ತಾಲೂಕಿನ ಎಮ್ಮೇದೊಡ್ಡಿ ಸರ್ವೇ ನಂ 70ರ ಶಿವಪುರದಲ್ಲಿ ಅರಣ್ಯ ಇಲಾಖೆ ನೀಲಗಿರಿ ಸಸಿ ನೆಡಲು ಮುಂದಾದಾಗ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರ ನಡುವೆ ನಡೆದ ಮಾರಾಮಾರಿಯಲ್ಲಿ ಇಬ್ಬರು ಅರಣ್ಯ ರಕ್ಷಕರು ಮತ್ತು ಮಹಿಳೆಯರು ಸೇರಿ ಏಳು ಜನ ರೈತರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಗುರುವಾರ ಬೆಳಿಗ್ಗೆ ಶಿವಪುರ ಗ್ರಾಮದ 50 ಹೆಕ್ಟರ್ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿ, ಆರ್ಎಫ್ಒಗಳಾದ ಗಂಗಾಧರ್, ರವೀಂದ್ರನಾಯಕ್, ಕೆ.ಎ. ಮೂಗಣ್ಣಗೌಡ ನೇತೃತ್ವದಲ್ಲಿ ನೀಲಗಿರಿ ಸಸಿ ನೆಡಲು ತೆರಳಿದಾಗ ಗ್ರಾಮದ ರೈತರು ಸಾಗುವಳಿ ಮಾಡುತ್ತಿರುವ ಭೂಮಿಯಲ್ಲಿ ಸಸಿ ನೆಡಬಾರದು ಎಂದು ಪ್ರತಿಭಟನೆ ಮಾಡಿ ಕಾರ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಗಲಭೆ ಆರಂಭವಾಯಿತು.
ಗಾಯಗೊಂಡವರು: ಪೊಲೀಸರು ಸ್ಥಳಕ್ಕೆ ಬಾರದೆ ಗಲಾಟೆ ಗಂಭೀರ ಸ್ಥಿತಿಗೆ ಹೋದ ಪರಿಣಾಮ ಅರಣ್ಯ ರಕ್ಷಕ ಮಲ್ಲೇಶನಾಯ್ಕ, ಮಂಜಾನಾಯ್ಕ ಮತ್ತು ಶಿವಪುರ ಗಾಮದ ಕೃಷಿಕ ರಾಮಮ್ಮ, ಹನುಮಂತಮ್ಮ, ಚಿಕ್ಕಾಲಘಟ್ಟ ಗ್ರಾಮದ ಗೋವಿಂದಾಭೋವಿ, ಈಶ್ವರಾಭೋವಿ ಮತ್ತು ಕೃಷ್ಣಾ ಭೋವಿ ಗಾಯಗೊಂಡಿದ್ದು ಗಾಯಾಳುಗಳನ್ನು ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಕುರಿತು ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹೇಳಿಕೆ ಪ್ರತಿ ಹೇಳಿಕೆ ನೀಡಿದ್ದಾರೆ.
ಹುಲಿ ಸಂರಕ್ಷಿತ ಪ್ರದೇಶ: ಘಟನೆ ಕುರಿತು ವಲಯ ಅರಣ್ಯಾಧಿಕಾರಿ ಗಂಗಾಧರ್ ಮತ್ತು ಲಕ್ಷ್ಮಣಪ್ಪ ಮಾತನಾಡಿ, ಎಮ್ಮೇದೊಡ್ಡಿಯ ಸರ್ವೆ ನಂ 70 ರಲ್ಲಿ 13 ಸಾವಿರ ಹೆಕ್ಟರ್ ಮೀಸಲು ಅರಣ್ಯ ಪ್ರದೇಶ ಇದ್ದು, ಹುಲಿ ಸಂರಕ್ಷಿತ ಪ್ರದೇಶ ಎಂದು ಸರ್ಕಾರ ಘೋಷಿಸಿದೆ.
ಅಲ್ಲದೆ ಕರ್ನಾಟಕ ಅರಣ್ಯ ಅಭಿವೃದ್ಧಿ ಯೋಜನೆ ಹಿನ್ನೆಲೆಯಲ್ಲಿ ಶಿವಪುರದ 50 ಹೆಕ್ಟೇರ್ ಪ್ರದೇಶದಲ್ಲಿ ನೀಲಗಿರಿ ಬೆಳೆಸಲಾಗಿತ್ತು.
ಪ್ರತೀ 10 ವರ್ಷಕ್ಕೊಮ್ಮೆ 3 ಬಾರಿ ಕಟಾವು ಮಾಡಿದ್ದು ಈ ಭಾರಿ ಮತ್ತೆ ಹಳೆಯ ಬೇರು ತೆಗೆದು ಹೊಸದಾಗಿ ನೀಲಗಿರಿ ಸಸಿ ನೆಡುವಂತೆ ಮೇಲಾಧಿಕಾರಿಗಳು ಅದೇಶಿಸಿದ್ದರು.
ತಹಸೀಲ್ದಾರ್ರವರು ದಾಖಲೆ ಪರೀಶೀಲಿಸಿ ಅನುಮತಿ ನೀಡಿದ ನಂತರ ಸಿಬ್ಬಂದಿಯೊಂದಿಗೆ ನೀಲಗಿರಿ ನೆಡಲು ತೆರಳಿದ ಸಂದರ್ಭದಲ್ಲಿ ಗ್ರಾಮಸ್ಥರು ಸಿಬ್ಬಂದಿ ಕಾರ್ಯಕ್ಕೆ ಅಡ್ಡಿಪಡಿಸಿ ಅರಣ್ಯ ಇಲಾಖೆ ನೌಕರರ ಮೇಲೆ ಹಲ್ಲೆ ನಡೆಸಿದ್ದರಿಂದ ಇಬ್ಬರು ನೌಕರರು ಗಂಭೀರವಾಗಿ ಗಾಯಗೊಂಡ್ದಿದಾರೆ ಎಂದು ಆರೋಪಿಸಿದರು.
ಇದಕ್ಕೂ ಮುನ್ನ ಪೊಲೀಸರಿಗೆ ಮುಂಜಾಗ್ರತೆಯಾಗಿ ತಿಳಿಸಿದರೂ ಪೊಲೀಸರು ಬರಲಿಲ್ಲ. ಬಂದಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ ಎಂದರು.
ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಶಿವಪುರ ಗ್ರಾಮದ ರೈತರು ಮಾತನಾಡಿ, ಈ ಜಾಗದಲ್ಲಿ ಕಳೆದ 35 ವರ್ಷದ ಹಿಂದೆ ಗ್ರಾಮದ ರೈತರು ಸಾಗುವಳಿ ಮಾಡುತ್ತಿದ್ದರು. ಉದ್ಯೋಗಕ್ಕಾಗಿ ಕಾಫಿ ತೋಟಕ್ಕೆ ನಾವು ತೆರಳಿದ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಬಲವಂತವಾಗಿ ನೀಲಗಿರಿ ಮರ ಬೆಳೆಸಿದ್ದರು.
ಮತ್ತೆ ಈ ಭೂಮಿಯಲ್ಲಿ ಸಸಿ ನೆಡಲು ಮುಂದಾಗುವುದರ ಕುರಿತು ತಹಸೀಲ್ದಾರರಿಗೆ ತಿಳಿಸಿದಾಗ ತಹಸೀಲ್ದಾರ್ರವರು ಅಲ್ಲಿ ಸಸಿ ನೆಡುವುದು ಬೇಡ ಎಂದು ಸೂಚಿಸಿದರೂ ನೀಲಗಿರಿ ಸಸಿ ಹಾಕಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ಆರೋಪಿಸಿದರು.
ಪ್ರಕರಣದ ಬಗ್ಗೆ ಈಗಾಗಲೇ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠರಿಗೆ ಈ ಸಂಬಂಧ ದೂರು ನೀಡಲಾಗಿದೆ. ಮುಂದಿನ ಆದೇಶ ಮತ್ತು ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.