ಇನಾಂ ಭೂಮಿ ತೆರವು: ಪರಿಶೀಲನಾ ಅರ್ಜಿ ಸಲ್ಲಿಸಿ
ಚಿಕ್ಕಮಗಳೂರು: ಕಳಸದ ಇನಾಂ ಭೂಮಿ ತೆರವು ಸಂಬಂಧ ನೀಡಿರುವ ತೀರ್ಪನ್ನು ಪುನರ್ ಪರಿಶೀಲಿಸಲು ಹೈಕೋರ್ಟ್ಗೆ ಅರ್ಜಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮೂಡಿಗೆರೆ ಕ್ಷೇತ್ರದ ಶಾಸಕ ಬಿ.ಬಿ. ನಿಂಗಯ್ಯ ಹೇಳಿದರು.
ಕಳಸ ಭಾಗದ ಜನರ ಸಮಸ್ಯೆ ಬಗ್ಗೆ ಸದನದಲ್ಲಿ ಗಮನ ಸೆಳೆಯಲಾಗಿದೆ. ಕಂದಾಯ, ಅರಣ್ಯ, ಕಾನೂನು, ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಕಾಫಿ ಮತ್ತು ಸಾಂಬಾರ ಮಂಡಳಿಯ ಅಧಿಕಾರಿಗಳು ಒಳಗೊಂಡ ತಜ್ಞರ ಸಮಿತಿ ರಚಿಸಿ, ಕಳಸಕ್ಕೆ ಕಳುಹಿಸಿಕೊಡುವಂತೆ ಸದನದ ಗಮನ ಸೆಳೆಯಲಾಗಿದ್ದು, ಇದಕ್ಕೆ ಕಂದಾಯ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇನಾಂ ಭೂಮಿ: ಸುಮಾರು 600 ವರ್ಷಗಳ ಹಿಂದೆ ರಾಜ ಮನೆತನದವರು ಇನಾಂ ಭೂಮಿಯನ್ನು ನೀಡಿದ್ದು, ಇಲ್ಲಿ ಬಹಳಷ್ಟು ಮಂದಿ ಸಾಗುವಳಿ ಮಾಡಿಕೊಂಡು ತಲತಲಾಂತರದಿಂದ ಜೀವನ ನಡೆಸುತ್ತಿದ್ದಾರೆ. ಹಲವು ಜನರಿಗೆ ಸಾಗುವಳಿ ಚೀಟಿಯನ್ನೂ ನೀಡಲಾಗಿದೆ. ಆದರೆ, ಇತ್ತೀಚೆಗೆ ಇದು ಅರಣ್ಯ ಭೂಮಿ ಎಂಬುದು ಗಮನಕ್ಕೆ ಬಂದಿದ್ದು, ಇದನ್ನು ತೆರವುಗೊಳಿಸಿದರೆ ಚಿಕ್ಕಪುಟ್ಟ ಹಿಡುವಳಿದಾರರಿಗೆ ತುಂಬಾ ತೊಂದರೆಯಾಗಲಿದೆ ಎಂದರು.
ಸರ್ಕಾರ ಇಲ್ಲಿನ ಜನರನ್ನು ತೆರವುಗೊಳಿಸಿದರೆ ಜನ ವಿರೋಧಿ ನಿಲುವು ಆಗುತ್ತದೆ. ಆದ್ದಿರಂದ ಸರ್ಕಾರ ಹೈಕೋರ್ಟ್ ತೀರ್ಪಿನ ಬಗ್ಗೆ ಪುನರ್ ಪರಿಶೀಲನಾ ಅರ್ಜಿಯನ್ನು ಹಾಕಬೇಕು ಎಂದು ಆಗ್ರಹಿಸಿದ ಅವರು, ಅಗತ್ಯ ಬಿದ್ದರೆ ಸರ್ವ ಪಕ್ಷ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿ ಕರೆದುಕೊಂಡು ಹೋಗಲಾಗುವುದು. ಇದರ ಜತೆಗೆ ಕಾನೂನು ಹೋರಾಟವನ್ನೂ ಮುಂದುವರೆಸಲಾಗುವುದು ಎಂದು ಹೇಳಿದರು.
ರು. 55ಕೋಟಿ ನಷ್ಟ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಸುಮಾರು ರು. 55 ಕೋಟಿ ನಷ್ಟ ಸಂಭವಿಸಿದೆ. ಆಲ್ದೂರು ಹೋಬಳಿಯಲ್ಲಿ 14 ರಸ್ತೆಗಳಿಗೆ ಹಾನಿಯಾಗಿದ್ದು, ರು. 1.40 ಕೋಟಿ, ಅಂಬಳೆ ಹೋಬಳಿಯಲ್ಲಿ 10 ರಸ್ತೆ, 3 ಸೇತುವೆ, ಮೋರಿಗಳಿಗೆ ಹಾನಿಯಾಗಿದ್ದು ಇದರಿಂದ ರು. 1.20 ಕೋಟಿ, ಆವತಿ ಹೋಬಳಿಯಲ್ಲಿ 11 ರಸ್ತೆ, 2 ಸೇತುವೆಗೆ ಹಾನಿಯಾಗಿದ್ದು ಇದರಿಂದ ರು. 70 ಲಕ್ಷ, ಆಲ್ದೂರು ಹೋಬಳಿಯಲ್ಲಿ 8 ರಸ್ತೆಗಳಿಗೆ ಹಾನಿಯಾಗಿದ್ದು ಇದರಿಂದ ರು. 90 ಲಕ್ಷ ನಷ್ಟ ಸಂಭವಿಸಿದೆ.
ಚಿಕ್ಕಮಗಳೂರು ತಾಲೂಕಿನಲ್ಲಿ 23 ಮನೆಗಳಿಗೆ ಹಾನಿಯಾಗಿದ್ದು, ಮನೆ ಕಳೆದುಕೊಂಡವರಿಗೆ ರು. 70,200 ಪರಿಹಾರ ವಿತರಿಸಲಾಗಿದೆ ಎಂದರು.
78 ಮನೆಗಳಿಗೆ ಹಾನಿಯಾಗಿದ್ದು, ಇದರಿಂದ ರು. 32 ಲಕ್ಷ ನಷ್ಟವಾಗಿದ್ದು, ತಾತ್ಕಾಲಿಕವಾಗಿ ರು. 2,47,000 ಪರಿಹಾರ ವಿತರಿಸಲಾಗಿದೆ ಎಂದರು.
ಕಾಫಿ, ಕಾಳು ಮೆಣಸು, ಬಾಳೆ, ಅಡಕೆ ತೋಟಗಳಿಗೆ ಮಳೆಯಿಂದ ನಷ್ಟ ಉಂಟಾಗಿದೆ. ಒಂದೆಡೆ ಮಳೆಯಿಂದ ಹಾನಿ ಸಂಭವಿಸಿದ್ದರೆ, ಇನ್ನೊಂದೆಡೆ ಮೂಡಿಗೆರೆ ಕ್ಷೇತ್ರದಲ್ಲಿ ಆನೆ ಹಾವಳಿಯಿಂದ ಬೆಳೆ ಹಾನಿ ಸಂಭವಿಸಿದೆ. ಗುರುವಾರದಂದು ಫಲ್ಗುಣಿಯಲ್ಲಿ ನಾಲ್ಕು ಆನೆಗಳು ಕಂಡು ಬಂದಿವೆ ಎಂದು ಹೇಳಿದರು.