ಪಾಕಿಸ್ತಾನದ ಕೃತ್ಯ ಖಂಡಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಮೂಡಿಗೆರೆ ಆ.8 ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನಿ ಸೈನಿಕರು ಭಾರತದ ಗಡಿ ಭದ್ರತಾ ಪಡೆಯ ಯೋಧರನ್ನು ಹತ್ಯೆ ಮಾಡಿರುವ ಕೃತ್ಯ ಖಂಡಿಸಿ ಶ್ರೀರಾಮಸೇನೆ ಕಾರ್ಯಕರ್ತರು ಗುರುವಾರ ಪಟ್ಟಣದ ಲಯನ್ಸ್ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ತಾಲೂಕು ಅಧ್ಯಕ್ಷ ಉಗ್ಗೆಹಳ್ಳಿ ಅಭಿಲಾಷ್ ಮಾತನಾಡಿ, ಭಾರತದ ಗಡಿಯೊಳಗೆ ಪಾಕಿಸ್ತಾನಿ ಸೇನೆ ಅಪ್ರಚೋಧಿತ ಧಾಳಿ ನಡೆಸಿ ನಮ್ಮ ದೇಶದ ಯೋಧರನ್ನು ಹತ್ಯೆ ಮಾಡಿದ್ದು ಭಾರತದ ಸೈನಿಕರ ಮೇಲೆ ಪಾಕಿಸ್ತಾನ ನಿರಂತರವಾಗಿ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿ ಧಾಳಿ ನಡೆಸುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ದೇಶದ ಭದ್ರತೆಗೆ ಧಕ್ಕೆ ತರುವ ರೀತಿಯಲ್ಲಿ ಹುನ್ನಾರ ನಡೆಸುತ್ತಿರುವುದು ಸ್ಪಷ್ಟವಾಗಿದೆ.
ದೆಹಲಿಯ ಸಂಸತ್ ಭವನದಿಂದ ಹಳ್ಳಿಯ ಗುಡಿಯವರೆಗೂ ದೇಶ ಭಯೋತ್ಪಾದಕರ ಧಾಳಿಗೆ ತುತ್ತಾಗುತ್ತಿದ್ದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದರು.
ಕೇಂದ್ರ ಸರ್ಕಾರ ಕೂಡಲೇ ಪಾಕಿಸ್ತಾನಿ ರಾಯಬಾರಿಯನ್ನು ಕರೆಸಿ ಛೀಮಾರಿ ಹಾಕಿ, ವಾಪಸ್ಸು ಕಳುಹಿಸುವುದರೊಂದಿಗೆ ಭಾರತದ ರಾಯಬಾರಿಯನ್ನು ವಾಪಸ್ಸು ಕರೆಸಿಕೊಂಡು ಎಲ್ಲ ರಾಜ ತಾಂತ್ರಿಕ ವ್ಯವಹಾರಗಳನ್ನು ಸ್ಥಗಿತ ಗೊಳಿಸಿ, ಪಾಪಿ ಪಾಕಿಸ್ತಾನಕ್ಕೆ ಅವರದೇ ರೀತಿಯಲ್ಲಿ ತಕ್ಕ ಉತ್ತರ ನೀಡಬೇಕೆಂದು ಒತ್ತಾಯಿಸಿದರು. ಉಪಾಧ್ಯಕ್ಷ ಪ್ರಕಾಶ್, ತಾಲೂಕು ಸಂಘದ ಕಾರ್ಯದರ್ಶಿ ಅವಿನಾಶ್, ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಜೆಡಿಎಸ್ ಖಂಡನೆ
ಚಿಕ್ಕಮಗಳೂರು: ತಮ್ಮ ಜೀವನವನ್ನು ಪಣಕಿಟ್ಟು ದೇಶ ರಕ್ಷಣೆ ಕಾರ್ಯದಲ್ಲಿ ತೊಡಗಿದ ಯೋಧರ ಮೇಲೆ ದಾಳಿ ನಡೆಸಿ ಹತ್ಯೆಗೈದಿರುವ ಪಾಕಿಸ್ಥಾನಿಗಳ ಕೃತ್ಯವನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ಎಸ್. ಮಂಜಪ್ಪ ಖಂಡಿಸಿದ್ದಾರೆ. ಕದನ ವಿರಾಮ ಉಲ್ಲಂಘಿಸಿರುವ ಪಾಕ್ ಕೃತ್ಯ ತನ್ನ ಹೇಡಿತನ ಪ್ರದರ್ಶಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇಂದ್ರದ ಕಾಂಗ್ರೆಸ್ ಸರ್ಕಾರ ದೇಶದ ರಕ್ಷಣೆ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿರುವುದೆ ಇದಕ್ಕೆ ಕಾರಣ. ದೇಶಕ್ಕೆ ದಕ್ಕೆಯುಂಟು ಮಾಡುವ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕಾದ ಜವಾಬ್ದಾರಿಯುತ ಕೇಂದ್ರದ ರಕ್ಷಣಾ ಸಚಿವರು ಬಿಗಿ ನಿಲುವು ತಾಳಬೇಕೆಂದು ಆಗ್ರಹಿಸಿದ್ದಾರೆ.