ಪೋಷಕರು ಮಕ್ಕಳ ಪ್ರಗತಿ ಚರ್ಚಿಸಿ
ನರಸಿಂಹರಾಜಪುರ: ಪೋಷಕರು ಆಗಾಗ್ಗೆ ಶಾಲೆಗೆ ಬಂದು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಡಿ. ರಾಜಪ್ಪ ಸಲಹೆ ನೀಡಿದರು.
ಹೊಸಕೆರೆ ಶಾಲಾ ಆವರಣದಲ್ಲಿ ಶುಕ್ರವಾರ ದಾನಿಗಳು ಮಕ್ಕಳಿಗೆ ನೀಡಿದ ವಿವಿಧ ಪರಿಕರಗಳನ್ನು ನೀಡುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ಯಾವುದೇ ಶಾಲೆ ಅಭಿವೃದ್ಧಿ ಹೊಂದಬೇಕಾದರೆ ಪೋಷಕರ ಸಹಕಾರವೂ ಅತಿ ಮುಖ್ಯ ಎಂದು ಅವರು ತಿಳಿಸಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಕೆ. ಗುರುಶಾಂತಪ್ಪ ಮಾತನಾಡಿ, ಖಾಸಗಿ ಶಾಲೆಯಷ್ಟೇ ಸರ್ಕಾರಿ ಶಾಲೆಗಳು ಉತ್ತಮವಾಗಿ ನಡೆಯುತ್ತಿವೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಪಿ.ಡಿ. ಬೇಬಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಕೃಷ್ಣ ನಾಯ್ಕ್, ಪ್ರಸನ್ನ, ತಿಪ್ಪೇಸ್ವಾಮಿ, ಉಪೇಂದ್ರ, ಲಿಸ್ಸಿ, ಜೋಯ್ನ, ಟಿ. ಶ್ರೀನಿವಾಸ್ ಉಪಸ್ಥಿತರಿದ್ದರು. ದಾನಿಗಳಾದ ನರಸೀಪುರದ ಎಲಿಯಾಸ್ ನೀಡಿದ ಟೀ ಷರ್ಟ್, ಟೈ, ಬೆಲ್ಟ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ನೂತನ ಶಾಲಾಭಿವೃದ್ಧಿ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಸಾಜು ಆಯ್ಕೆಯಾದರು.