ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮುಸ್ಲಿಂ ಬಾಂಧವರಿಂದ ಶುಭಾಶಯ ವಿನಿಮಯ

Vishwanath S
Updated On : 10 Aug 2013, 12:24 pm

ಕ.ಪ್ರ.ವಾರ್ತೆ , ಚಿಕ್ಕಮಗಳೂರು,  ಆ.9
ಮುಸ್ಲಿಮರು ನಗರದಲ್ಲಿ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ರಂಜಾನ್ ಹಬ್ಬವನ್ನು ಆಚರಿಸಿದರು.
ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಂರು ಶುಕ್ರವಾರ ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇಲ್ಲಿನ ಕೆಂಪನಹಳ್ಳಿ ರಸ್ತೆಯ ಈದ್ಗಾ ಮೈದಾನಕ್ಕೆ ನಗರದ ವಿವಿಧೆಡೆಗಳಿಂದ ಆಗಮಿಸಿದ ಮುಸ್ಲಿಂರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಾರ್ಥನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್, ಪ್ರಭಾರಿ ಜಿಲ್ಲಾಧಿಕಾರಿ ಬಾಲಚಂದ್ರ, ಜಿಲ್ಲಾ ರಕ್ಷಣಾಧಿಕಾರಿ ಆರ್.ಎಚ್. ನಾಯಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಭೇಟಿ ನೀಡಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರಂಜಾನ್ ಮುಸ್ಲಿಂ ಸಮುದಾಯಕ್ಕೆ ಪವಿತ್ರವಾದ ಹಬ್ಬ. ಎಲ್ಲರೂ ಶಾಂತಿಯುತವಾಗಿ ಈ ಹಬ್ಬವನ್ನು ಆಚರಿಸಬೇಕು ಎಂದು ಕಿವಿ ಮಾತು ಹೇಳಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಪ್ರಾರ್ಥನಾ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್ ಅವರಿಗೆ ಮಾಜಿ ಸಚಿವ ಸಿ.ಆರ್. ಸಗೀರ್ ಅಹ್ಮದ್ ಅವರು ಶುಭಾಶಯ ಸಲ್ಲಿಸಿದರು.
ನ.ರಾ.ಪುರದಲ್ಲಿ ರಂಜಾನ್
ನರಸಿಂಹರಾಜಪುರ: ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂರು ಶುಕ್ರವಾರ ಮಸೀದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದ ಜಾಮೀಯಾ ಮಸೀದಿ ಹಾಗೂ ಪ್ರವಾಸಿ ಮಂದಿರ ಸಮೀಪದ ನೂರಾನಿ ಮಸೀದಿಯಲ್ಲಿ ಮುಸ್ಲಿಂರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಉಪವಾಸ ಗುರುವಾರ ಅಂತ್ಯಗೊಂಡಿದ್ದು ಶುಕ್ರವಾರ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಪರಸ್ಪರ ಶುಭಾಶಯ ಕೋರಿದ ನಂತರ ಮನೆಗಳಲ್ಲಿ ಸಿಹಿ ಊಟ ಮಾಡಲಾಯಿತು.
ಶೃಂಗೇರಿಯಲ್ಲಿ...
ಶೃಂಗೇರಿ: ಪಟ್ಟಣದಲ್ಲಿ ಶುಕ್ರವಾರ ಮುಸ್ಲಿಂರು ಸಂಭ್ರಮದಿಂದ ರಂಜಾನ್ ಹಬ್ಬವನ್ನು ಆಚರಿಸಿದರು. ಬೆಳಿಗ್ಗೆ ಜಾಮೀಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ರಂಜಾನ್ ಅಂಗವಾಗಿ ಕುತುಬ್ ಪಾರಾಯಣ, ವಿಶೇಷ ಉಪನ್ಯಾಸ ನಡೆಯಿತು. ನಂತರ ಪರಸ್ಪರ ಈದ್ ಶುಭಾಶಯ ವಿನಿಮಯ ಮಾಡಿಕೊಂಡರು. ಜಾಮಿಯಾ ಮಸೀದಿ ಧರ್ಮಗುರು ಮೌಲಾನ ಖಾದ್ರಿ ನೌಶಾದ್ ರಿಜ್ವಿ ಮಾತನಾಡಿ, ರಂಜಾನ್ ತಿಂಗಳ ಉಪವಾಸ ಪಾವನ ಜೀವನಕ್ಕೆ ಪ್ರೇರಕವಾಗಿರುವ ವಿಷಿಷ್ಟ ಆರಾಧನೆಯಾಗಿದೆ.
ಉಪವಾಸದಿಂದ ಹುಟ್ಟಿದ ಭಾವನೆ ಹಸಿದವರ, ಬಾಯಾರಿದವರ ದಾಹ ಅರ್ಥವಾಗಲಿ. ಹಬ್ಬಗಳು ಮಾನವೀಯ ಮೌಲ್ಯಗಳ ಪ್ರತೀಕವಾದ ಶಾಂತಿ, ಸೌಹಾರ್ಧತೆಯ ಧ್ಯೋತಕವಾಗಿದೆ. ನಾವು ಬದುಕಿನುದ್ದಕ್ಕೂ ಸತ್ಯ ವಿಶ್ವಾಸಿಗಳಾಗಬೇಕಿದೆ ಎಂದರು.
ನಂತರ ಮಸೀದಿ ಮುಂಭಾಗದಿಂದ ಧಾರ್ಮಿಕ ಘೋಷಣೆಗಳೊಂದಿಗೆ ಹೊರಟ ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ಗೋರಿಗುಡ್ಡೆಯ ಸೂಫಿ ಸಂತ ಹಜರತ್ ಜಹೂರ್ ಷಾ ಔಲಿಯಾ ದರ್ಗಾಕ್ಕೆ ತೆರಳಿ,ಅಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement