ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಳ್ಳತನಕ್ಕೆ ಯತ್ನ: ಮಹಡಿಯಿಂದ ಬಿದ್ದ ಕಳ್ಳ

Vishwanath S
Updated On : 11 Aug 2013, 12:30 pm

ಕ.ಪ್ರ.ವಾರ್ತೆ  ,  ಮೂಡಿಗೆರೆ  ,   ಆ.10
ಕಳ್ಳರ ಗುಂಪೊಂದು ರಾತ್ರಿ ಸಮಯದಲ್ಲಿ ಎರಡಂತಸ್ಥಿನ ಮಹಡಿಯಲ್ಲಿದ್ದದ ಮನೆಯಲ್ಲಿ ಕಳ್ಳತನ ಮಾಡಲು ಯತ್ನಿಸಿದಾಗ ಗುಂಪಿನಲ್ಲಿದ್ದ ಯುವಕ ಆಯಾತಪ್ಪಿ ಕೆಳಗೆ ಬಿದ್ದ ಘಟನೆ ಮೂಡಿಗೆರೆ ಠಾಣಾವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ಆದರ್ಶ ನಗರದ ಎರಡನೇ ಮಹಡಿಯಲ್ಲಿ ವಾಸವಾಗಿದ್ದ ಉಸ್ಮಾನ್ ಎಂಬುವವರ ಮನೆಗೆ ಶುಕ್ರವಾರ ರಾತ್ರಿ ನುಗ್ಗಿದ ಕಳ್ಳರ ಗುಂಪು ಮನೆ ಕಳ್ಳತನಕ್ಕೆ ಯತ್ನಿಸಿದಾಗ ಗುಂಪಿನಲ್ಲಿದ್ದ ಯುವಕ ಆಕಸ್ಮಿಕವಾಗಿ ಕಟ್ಟಡದಿಂದ ಕೆಳಗೆ ಬಿದ್ದು ಕೂಗಾಡಲು ಶುರು ಮಾಡಿದಾಗ ಅಕ್ಕ ಪಕ್ಕದ ಮನೆಯವರು ಎದ್ದು ಹೊರಕ್ಕೆ ಬಂದರು. ದೂರದಿಂದಲೇ ಜನರ ಗುಂಪನ್ನು ನೋಡಿದ ಕಳ್ಳರು ತಮ್ಮ ಕಾಲಿಗೆ ಬುದ್ದಿ ಹೇಳಿದರು. ಕಟ್ಟಡದಿಂದ ಕೆಳಗೆ ಬಿದ್ದಿದ್ ಯುವಕನನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.
ಆಸ್ಪತ್ರೆಗೆ ದಾಖಲಾಗಿರುವ ಯುವಕ ಹರಪನಹಳ್ಳಿಯ ಸುರೇಶ(21) ಎಂದು ತಿಳಿದು ಬಂದಿದ್ದು. ಅಂತಸ್ಥಿನಿಂದ ಬಿದ್ದ ಪರಿಣಾಮ ತಲೆ, ಕೈ, ಕಾಲಿಗೆ ಏಟು ಬಿದ್ದಿದ್ದು, ಸೊಂಟದ ಮೂಳೆ ಮುರಿದು ಹೋಗಿದೆ. ಠಾಣಾಧಿಕಾರಿ ಅನಂತ ಪದ್ಮನಾಭ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
1.30 ಲಕ್ಷ ಮೌಲ್ಯದ ಸರ ಅಪಹರಣ
ಶಿವಮೊಗ್ಗ: ಮಹಿಳೆಯೊಬ್ಬರ ವಂಚಿಸಿ ಸರ ಅಪಹರಣ ಮಾಡಿರುವ ಘಟನೆ ಬಿ.ಎಚ್.ರಸ್ತೆಯಲ್ಲಿ ನಡೆದಿದೆ.
ವಿನೋಬನಗರದ ಸಾವಿತ್ರಮ್ಮ ಎಂಬುವವರು ಗಾಂಧಿ ಬಜಾರ್‌ಗೆ ಹೋಗಿ ವಾಪಸ್ಸು ಬರುವಾಗ ಮಹಿಳೆಯರಿಬ್ಬರು, ರಸ್ತೆಯಲ್ಲಿ ಬಿದ್ದಿದ್ದ ಪರ್ಸ್‌ನ್ನು ತೆಗೆದುಕೊಂಡಿದ್ದಾರೆ. ಅದನ್ನು ಸಾವಿತ್ರಮ್ಮ ಅವರು ಇದು ನಿಮ್ಮ ಪರ್ಸ್ ಎಂದು ಕೇಳಿದೆ. ಅದಕ್ಕೆ ಅವರು ನನ್ನದಲ್ಲ ಅಂತಾ ಹೇಳಿದರು. ನಂತರ ಅದನ್ನು ತೆಗೆದು ನೋಡಿದಾಗ 500- 1,000 ನೋಟುಗಳಿದ್ದವು. ಇದನ್ನು ಆ ಇಬ್ಬರು ಮಹಿಳೆಯರು ನಾವು ಹಂಚಿಕೊಳ್ಳೊಣ ಎಂದು ತಿಳಿಸಿದ್ದು, ಹತ್ತಿರದ ಸರ್ಕಾರಿ ಬಾಲಿಕಾ ಹಿರಿಯ ಪ್ರಾಥಮಿಕ ಶಾಲೆ ಆವರಣದೊಳಗೆ ಕರೆದೊಯ್ಯದ್ದರು. ಇದೇ ವೇಳೆಗೆ 42 ವರ್ಷ ವಯಸ್ಸಿನ ಗಂಡಸು ನಮ್ಮ ಹತ್ತಿರ ಬರುತ್ತಿದ್ದುದನ್ನು ನೋಡಿ ಪರ್ಸ್‌ನು ಆ ಹೆಂಗಸು ಮುಚ್ಚಿಕೊಂಡಳು. ನಾನು ಹೆದರಿಕೊಂಡು ನನ್ನ ಮಾಂಗಲ್ಯ ಸರ ತೆಗೆದು ತಲೆಮೇಲಿಟ್ಟು ಪ್ರಮಾಣ ಮಾಡಿದೆ. ನಂತರ ನನ್ನ ಸರವನ್ನು ಆಕೆ ಪಡೆದು ಪೇಪರ್ ಸುತ್ತಿ ನನ್ನ ಸೀರೆ ಸೆರಗಿನ ತುದಿಗೆ ಗಂಟು ಹಾಕಿದಳು. ತಕ್ಷಣ ಅವರು ಮೂವರೂ ಅಲ್ಲಿಂದ ಬಿ.ಎಚ್. ರಸ್ತೆ ಕಡೆಗೆ ಹೋದರು. ನನಗೆ ಅನುಮಾನ ಬಂದು ನಾನು ಸ್ವಲ್ಪ ಮುಂದೆ ಬಂದು ನನ್ನ ಸೀರೆ ಸೆರಗಿನಲ್ಲಿ ಕಟ್ಟಿದ್ದ ಗಂಟನ್ನು ಬಿಚ್ಚಿ ನೋಡಿದಾಗ ಬಿಳಿ ಪೇಪರ್‌ನಲ್ಲಿ ಸುತ್ತಿದ ಕಲ್ಲುಗಳು ಇದ್ದವು. ಮಾಂಗಲ್ಯ ಸರ ತೆಗೆಸಿ ಸೆರಗಿನಲ್ಲಿ ಕಟ್ಟಿಕೊಡುವಂತೆ ನಟಿಸಿ ಮೋಸ ಮಾಡಿ ತೆಗೆದುಕೊಂಡು ಹೋಗಿರುತ್ತಾರೆ. 1.30 ಲಕ್ಷ ಎಂದು ಅಂದಾಜಿಸಲಾಗಿದೆ. ಪ್ರಕರಣ ಕೋಟೆ ಠಾಣೆಯಲ್ಲಿ ದಾಖಲಾಗಿದೆ.
1.4 ಕೆ.ಜಿ. ಗಾಂಜಾ ವಶ
ಸಾಗರ: ಪಟ್ಟಣದ ಆರ್.ಪಿ. ರಸ್ತೆಯ ದ್ವಾರಕನಾಥ ಕಲಾಮಂದಿರದ ಬಳಿ ಅಮಲಿನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ಪರಿಶೀಲನೆ ನಡೆಸಿದಾಗ 1.4 ಕೆ.ಜಿ. ಗಾಂಜಾ ಇರುವುದು ಪತ್ತೆಯಾಗಿದೆ.  ಪೇಟೆಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಎಚ್.ಇ. ಮಂಜಪ್ಪ ಗಸ್ತು ತಿರುಗುತ್ತಿದ್ದಾಗ ಕಂಡುಬಂದಿದೆ.
ಅಕ್ರಮ ನಾಟ ಸಾಗಣೆ: ಇಬ್ಬರ ಬಂಧನ
ಕ.ಪ್ರ.ವಾರ್ತೆ ಟಿ ಮೂಡಿಗೆರೆ ಟಿ  ಆ.10
ತಾಲೂಕಿನ ದಾರದಹಳ್ಳಿ ಹ್ಯಾಂಡ್‌ಪೋಸ್ಟ್ ಬಳಿ ಶನಿವಾರ ಮುಂಜಾನೆ ರಹದಾರಿ ಇಲ್ಲದ ಮರಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ವಲಯು ಅರಣ್ಯ ಇಲಾಖೆಯ ಸಿಬ್ಬಂಧಿಗಳು ಮಾಲು ಸಹಿತ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಗೌಡಹಳ್ಳಿ ಮಾರ್ಗವಾಗಿ ಮೂಡಿಗೆರೆಗೆ ಬರುತ್ತಿದ್ದ ಲಾರಿಯೊಂದರಲ್ಲಿ ರಹದಾರಿ ಇಲ್ಲದೆ ಅಕ್ರಮವಾಗಿ ಮರಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ವರ್ತಮಾನದ ಮೇರೆಗೆ. ಅರಣ್ಯ ಇಲಾಖೆಯ ಸಿಬ್ಬಂಧಿಗಳು ನಾಖಬಂಧಿ ರಚಿಸಿ ಲಾರಿಯನ್ನು ತಡೆದು ಪರಿಶೀಲಿಸಿದಾಗ 15 ಘನಮೀಟರ್ ಕಾಡು ಜಾತಿಯ ಬ್ಲೀಡ್ಸ್ ಮರಗಳು ರಹದಾರಿ ಇಲ್ಲದೆ ಸಾಗಿಸುತ್ತಿದ್ದು ಪತ್ತೆಯಾ ಗಿದ್ದು. ಲಾರಿ ಮತ್ತು ಮರವನು ವಶಕ್ಕೆ ತೆಗೆದುಕೊಂಡು ಲಾರಿ ಚಾಲಕ ಕಿರಣ್ ಮತ್ತು ಕ್ಲೀನರ್ ಎಸ್.ಜಯಣ್ಣರವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಖಾರಿ ರವಿರಾಜ್ ನಾರಾಯಣ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಮಾರ್ಗದರ್ಶನದಲ್ಲಿ ಉಪ ಅರಣ್ಯ
ಸಂರಕ್ಷಣಾಧಿಕಾರಿ ರವಿಕುಮಾರ್, ದಯಾಕರ್, ದೀಪಕ್, ಲಕ್ಷ್ಮಣ್, ಮಲ್ಲೇಶ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
5 ಯೋಧರ ಹತ್ಯೆ: ಖಂಡನೆ
ತರೀಕೆರೆ:  ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಐವರು ಭಾರತೀಯ ಯೋಧರನ್ನು ಹತ್ಯೆ ಮಾಡಿದ ಪಾಕಿಸ್ತಾನ ಯೋಧರ ಕೃತ್ಯವನ್ನು ಬಿಜೆಪಿ ಮುಖಂಡ, ಮ್ಯಾಮ್‌ಕೋಸ್ ನಿರ್ದೇಶಕ ಆರ್.ದೇವಾನಂದ್ ಖಂಡಿಸಿದ್ದಾರೆ. ಭಾರತದ ಮೇಲೆ ಹಲವಾರು ಬಾರಿ ಪ್ರತ್ಯಕ್ಷ ಮತ್ತು ಪರೋಕ್ಷ ದಾಳಿ ಮಾಡುತ್ತಿದ್ದರೂ ಭಾರತ ಸರ್ಕಾರ ಮಾತ್ರ ಮೌನಕ್ಕೆ ಶರಣಾಗಿರುವಂತೆ ಕಾಣುತ್ತಿದೆ. ಇದು ಅತ್ಯಂತ ದುಃಖಕರ ಸಂಗತಿ. ಈ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಸರಿಯಾದ ಕ್ರಮ ಕೈಗೊಂಡು ಪಾಕಿಸ್ತಾನಕ್ಕೆ ಸರಿಯಾದ ಉತ್ತರವನ್ನು ಕೊಡಬೇಕು ಮತ್ತು ಪಾಕಿಸ್ತಾನದ ಜೊತೆ ಎಲ್ಲಾ ತರಹದ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement