ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಂಜಾನ್ ಪ್ರೀತಿಯ ಸಂಕೇತ

Vishwanath S
Updated On : 11 Aug 2013, 12:30 pm

ಕ.ಪ್ರ.ವಾರ್ತೆ  ,  ಬೀರೂರು  ,   ಆ.10
ರಂಜಾನ್ ಹಬ್ಬವು ಬಡವರಿಗೆ ಶ್ರೀಮಂತರು ದಾನ ಮಾಡುವ ಮೂಲಕ ತ್ಯಾಗ ಮತ್ತು ಪ್ರೀತೀಯ ಸಂಕೇತವಾಗಿ ಆಚರಿಸಲಾಗುತ್ತದೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಹಿಂದೂ ಮುಸಲ್ಮಾನರು ಒಂದೇ ತಾಯಿಯ ಮಕ್ಕಳಿದ್ದಂತೆ ಎಲ್ಲರೂ ಸಮಾನವಾಗಿ, ಸೌಹಾರ್ಧತೆ ಮತ್ತು ಸಹಬಾಳ್ವೆಯಿಂದ ಬದುಕಬೇಕು. ಈ ಪ್ರಾರ್ಥನಾ ಮೈದಾನದಲ್ಲಿರುವ 1.18 ಗುಂಟೆ ಭೂಮಿಯನ್ನು ಈದ್ಗಾ ಮೈದಾನಕ್ಕೆ ಮೀಸಲಿಡಲಾಗುವುದು ಎಂದರು. ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಮಾತನಾಡಿ, ಮುಸ್ಲಿಮರಿಗೆ ಶುಭ ಹಾರೈಸಿ ಶಾದಿಮಹಲ್ ಕಟ್ಟಡ ನಿರ್ಮಾಣಕ್ಕೆ ನೆರವು ನೀಡುವುದಾಗಿ ತಿಳಿಸಿದರು.
ನಾಗರಾಜ್, ಮಾಣಿಕ ಭಾಷಾ, ಪುರಸಭೆ ಸದಸ್ಯರಾದ ಮುಕ್ತಿಯಾರ್, ಜಿಯವುಲ್ಲಾ ಮತ್ತು ಮುಸ್ಲಿಮರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.
ಕಡೂರಿನಲ್ಲಿ ಆಚರಣೆ
ಕಡೂರು: ಪಟ್ಟಣದ ಎಮ್ಮೇದೊಡ್ಡಿ ರಸ್ತೆ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಹಬ್ಬವನ್ನು ಆಚರಿಸಿದರು.
ಬೆಳಿಗ್ಗೆ ವಿವಿಧ ಮಸೀದಿಗಳಿಂದ ಆಗಮಿಸಿದ ಮುಸ್ಲಿಮರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಎಮ್ಮೇದೊಡ್ಡಿ ರಸ್ತೆ ಪಕ್ಕದಲ್ಲಿರುವ ಈದ್ಗಾ ಮೈದಾನಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಶುಭಾಶಯ ಕೋರಿ ಮಾತನಾಡಿದ ಶಾಸಕ ವೈ.ಎಸ್.ವಿ. ದತ್ತ, ಇಲ್ಲಿನ ಈ ಈದ್ಗಾ ಮೈದಾನಕ್ಕೆ ಕಲ್ಲಿನ ನೆಲ ಹಾಸು ಹಾಕಲು ಶಾಸಕರ ನಿಧಿಯಿಂದ 5 ಲಕ್ಷ ಅನುದಾನ ನೀಡಲಾಗುವುದು ಎಂದು ಹೇಳಿದರು.
ಪ್ರಾರ್ಥನೆ ಸಂದರ್ಭದಲ್ಲಿ ಮುಸ್ಲಿಂ ಧರ್ಮ ಗುರುಗಳು, ಮುಖಂಡರಾದ ಎನ್. ಇಮಾಮ್,ಬಶೀರ್ ಸಾಬ್, ನಜೀರ್ ಮತ್ತು ನೂರಾರು ಮುಸ್ಲಿಮರು ಪಾಲ್ಗೊಂಡಿದ್ದರು.
ರೋಟರಿ ಪದಗ್ರಹಣ
ಶೃಂಗೇರಿ: ಪಟ್ಟಣದ ಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯಲ್ಲಿ 2013-14 ನೇ ಸಾಲಿನ ನೂತನ ಇಂಟರ್ಯಾಕ್ಟ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ನೂತನ ಅಧ್ಯಕ್ಷೆ ಕಾವ್ಯ, ಪ್ರಧಾನ ಕಾಯದರ್ಶಿ ಶ್ರೇಯಸ್ ಸೇರಿದಂತೆ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ರೋಟರಿ ಅಧ್ಯಕ್ಷ ಮಹೇಶ್ ಕಾರ್ಯಕ್ರಮ ನೆರವೇರಿಸಿದರು. ದ.ರಾಜಣ್ಣ, ಡಾ.ನಿರಂಜನ್ ಕುಮಾರ್, ಹೆಚ್.ಎಸ್.ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಿಸಲಾಯಿತು.
ಸೈನಿಕರ ಹತ್ಯೆ ಖಂಡಿಸಿ ಪ್ರತಿಭಟನೆ
ಭದ್ರಾವತಿ: ಪಾಕಿಸ್ತಾನಿ ಸೈನಿಕರು ಭಾರತೀಯ ಸೈನಿಕರನ್ನು ಹತ್ಯೆಗೈದಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ವಿವಿಧ ಸಂಘ ಪರಿವಾರದ ಸಂಘಟನೆಗಳು ಮತ್ತು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಶನಿವಾರ ಬೆಳಗ್ಗೆ ಭದ್ರಾವತಿಯ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಪಾಕಿಸ್ತಾನದ ಅಧ್ಯಕ್ಷರ ಪ್ರತಿಕೃತಿ ದಹಿಸಿದರು.  ವಿಹಿಂಪ ರಾಜ್ಯ ಉಪಾಧ್ಯಕ್ಷ ಹಾ. ರಾಮಪ್ಪ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಧರ್ಮಪ್ರಸಾದ್, ವೀರಭದ್ರಪ್ಪ, ಮಂಜುನಾಥ್ ಮತ್ತಿತರ ನೇತೃತ್ವ ವಹಿಸಿದ್ದರು.
ಸಕಲೇಶಪುರದತ್ತ ನಡೆದ ಸಲಗದ ಹಿಂಡು
ಮೂಡಿಗೆರೆ: ಕಳೆದ 15 ದಿನಗಳಿಂದ ಮೂಡಿಗೆರೆ ತಾಲೂಕಿಗೆ ಸಕಲೇಶಪುರದಿಂದ ಆಗಮಿಸಿದ ಕಾಡಾನೆಗಳ ಹಿಂಡು ಉದುಸೆ, ಜೇನುಬೈಲ್, ಹೊಯ್ಸಳಲು, ಅಣಜೂರ್ , ಮುತ್ತಿಗೆ ಪುರದಲ್ಲಿ ಗದ್ದೆ- ತೋಟಗಳಿಗೆ ಬೆಳೆಗಳನ್ನು ನಾಶ ಪಡಿಸಿ ರೈತರು ಮತ್ತು ಬೆಳೆಗಾರರನ್ನು ಆತಂಕಕ್ಕಿಡು ಮಾಡಿದ್ದು, ಅರಣ್ಯ ಇಲಾಖೇ ಕಳೆದ ಮೂರು ದಿನಗಳ ಹಿಂದೆ ಕಾಡನೆಗಳನ್ನು ಮರಳಿ ಸಕಲೇಶಪುರದತ್ತ ಅಟ್ಟಿದ್ದರು. ಶುಕ್ರವಾರ ಸಂಜೆ ಸಕಲೇಶಪುರ ದಿಂದ ಹಿಂದಿರುಗಿದ ಮೂರು ಕಾಡಾನೆಗಳು ತಾಲೂಕಿನ ಮಾಕೋನಹಳ್ಳಿಗೆ ಲಗ್ಗೆ ಇಟ್ಟು ಕಾರಬೈಲ್ ಗ್ರಾಮದ ಎಂ.ಎನ್.ಅಶ್ವತ್,  ಎಂ.ಟಿ.ನಾಗರಾಜ್ ಅವರ ಗದ್ದೆ -ತೋಟಗಳಿಗೆ ಲಗ್ಗೆ ಇಟ್ಟು ಲಕ್ಷಾಂತರ ನಷ್ಟ ಉಂಟಾಗಿದೆ. ಕಾಡಾನೆಗಳೂ ತುದಿಯಾಳದಲ್ಲಿ ಬೀಡು ಬಿಟ್ಟಿದ್ದು. ಗ್ರಾಮಸ್ಥರು ಆತಂಕ್ಕೀಡಾಗಿದ್ದಾರೆ. ಆಣೆಗಳನ್ನು ಓಡಿಸಲು  ಇಲಾಖೆಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ವಿಜಯ, ಎಂಬಿ.ರಮೇಶ್ ಆರೋಪಿಸಿದ್ದಾರೆ.
ಹಾಲು ವಿತರಣೆ
ಶಿವಮೊಗ್ಗ: ನಾಗರಪಂಚಮಿ ಹಬ್ಬದ ಅಂಗವಾಗಿ ಶನಿವಾರ ನಗರದ ಬಸವಕೇಂದ್ರದಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು.
 ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಅವರು  ಬಡ ವಿದ್ಯಾರ್ಥಿಗಳಿಗೆ ಹಾಲು ವಿತರಣೆ ಮಾಡಿದರು.ಈ ವೇಳೆ ಕೇಂದ್ರದ ಅಧ್ಯಕ್ಷ ಬೆನಕಪ್ಪ, ಕತ್ತಿಗೆ ಚನ್ನಪ್ಪ, ಮೋಹನ್, ಚಂದ್ರಪ್ಪ ಮತ್ತಿತರರು ಇದ್ದರು.
ಯಂತ್ರದ ಮೂಲಕ ಬತ್ತ ನಾಟಿ: ಪ್ರಾತ್ಯಾಕ್ಷಿಕೆ
ಮೂಡಿಗೆರೆ: ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕನಿಷ್ಠ ಭೂಮಿಯಲ್ಲಿ ಗರಿಷ್ಠ ಉತ್ಪಾದನೆ ಮಾಡಲು ಭೂಮಿಯ ಫಲವತ್ತತೆಯ ಅನುಗುಣವಾಗಿ ನಿರ್ವಹಣೆ ಮಾಡುವ ಕೌಶಲ್ಯತೆ ಅಗತ್ಯ ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರಾದ ಭರತ್ ಕುಮಾರ್ ತಿಳಿಸಿದರು.
 ಪಟ್ಟಣದ ಹ್ಯಾಂಡ್‌ಪೋಸ್ಟ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಚಿಕ್ಕಮಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಐದು ದಿನದ ರೈತ ಅನುವುಗಾರರಿಗೆ ತರಬೇತಿ ಕಾರ್ಯಕ್ರಮದಲ್ಲಿ ರೈತರಿಗೆ ಭತ್ತದಲ್ಲಿ  ಯಾಂತ್ರಿಕರಣ ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುವುದಲ್ಲದೆ ಭತ್ತದ ನಾಟಿ ಮಾಡಿವ ಯಂತ್ರದ ಮೂಲಕ ನಾಟಿ ಮಾಡುವ ವಿಧಾನವನ್ನು ಪದ್ದತಿ ಪ್ರಾತ್ಯಾಕ್ಷಿಕೆ ಮೂಲಕ ತೋರಿಸಿ ಮಾಹಿತಿ ನೀಡಿ ಮಾತನಾಡಿದರು.  ಒಂದು ಭತ್ತದ ನಾಟಿ ಯಂತ್ರವನ್ನು ಖರೀದಿಸಿ ಉಪಯೋಗಿಸುವುದರಿಂದ ಕೂಲಿ ಕಾರ್ಮಿಕರ ಸಮಸ್ಯೆಯನ್ನು ಎದುರಿಸುವುದಲ್ಲದೆ ಕಡಿಮೆ ಸಮಯದಲ್ಲಿ ಹೆಚ್ಚು ಪ್ರದೇಶವನ್ನು ನಾಟಿ ಮಾಡುವುದರಿಂದ ಅಧಿಕ ಲಾಭಗೊಳಿಸಬಹುದು ಎಂದರು.
16 ರಂದು ರಂಗ ಶ್ರಾವಣ ಕಾರ್ಯಕ್ರಮ
ಕೊಪ್ಪ: ತಾಲೂಕು ಜಾನಪದ ಪರಿಷತ್ ವತಿಯಿಂದ ಆ.16 ರ ಸಂಜೆ 5 ಗಂಟೆಗೆ ಪಟ್ಟಣದ ತ್ಯಾಗರಾಜ ರಸ್ತೆಯ ಲಯನ್ಸ್ ಸಭಾಂಗಣದಲ್ಲಿ ರಂಗ ಶ್ರಾವಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಸಭಾಕಾರ್ಯಕ್ರಮದಲ್ಲಿ ಎಂ.ಎಂ. ಪ್ರಭಾಕರ ಕಾರಂತ್‌ರ ಬೆಳ್ಳಿ ಹಾಡು-ಬಣ್ಣದ ಪಾಡು ಗ್ರಂಥವನ್ನು ಜನಪದ ಪರಿಷತ್‌ನ ಗೌರವಾಧ್ಯಕ್ಷ ಹೆಚ್.ಜಿ. ವೆಂಕಟೇಶ್ ಅವರು ಮರು ಬಿಡುಗಡೆ ಮಾಡಿದಲಿದ್ದು, ವೇದಿಕೆಯಲ್ಲಿ ಕಿರುತೆರೆ ನಿರ್ದೇಶಕ ರಮೇಶ್ ಬೇಗಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ದಯಾನಂದ ಹೆಗ್ಡೆ, ಲಯನ್ಸ್ ಕ್ಲಬ್ ಕೊಪ್ಪ ಸಹ್ಯಾದ್ರಿ ಅಧ್ಯಕ್ಷ ಹೆಚ್.ಆರ್. ರತ್ನಾಕರ್ ಪಾಲ್ಗೊಳ್ಳಲಿದ್ದಾರೆ.ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸಂಜೆ 5-30 ರಿಂದ 6-30 ರವರೆಗೆ ರಮೇಶ್ ಬೇಗಾರ್ ನಿರ್ದೇಶನದ ಅರಮನೆ ಕಥಾ ಪ್ರಸಂಗ ನಾಟಕ ಪ್ರದರ್ಶನ ಮತ್ತು 6- 45 ರಿಂದ ಕುಂದಾಪುರದ ಶ್ರೀ ಮಹಾಗಪತಿ ಪ್ರವಾಸಿ ಯಕ್ಷಗಾನ ಮಂಡಳಿಯಿಂದ ಬಬ್ರುವಾಹನ ಕಾಳಗ ಕಥಾಪ್ರಸಂಗದ ಯಕ್ಷಗಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾನಪದ ಪರಿಷತ್‌ನ ಅಧ್ಯಕ್ಷ ಹೆಚ್.ಎಸ್. ಕಳಸಪ್ಪ ತಿಳಿಸಿದ್ದಾರೆ.
ಆ.18 ರಂದು ಸಮಾಲೋಚನೆ
ಕೊಪ್ಪ: ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘದ ಉಪಾಧ್ಯಕ್ಷ ಕೆ.ನರಸಿಂಹ ನಾಯಕ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ  ಸಮಾಲೋಚನಾ ಸಭೆಯನ್ನು ಆ.18 ರ ಬೆಳಿಗ್ಗೆ 11 ಗಂಟೆಗೆ ಕೊಪ್ಪ ಶಾಖೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.ಹಾಗೂ ಮಧ್ಯಾಹ್ನ 3 ಗಂಟೆಗೆ ಜಯಪುರದ ದುರ್ಗಾ ಪರಮೇಶ್ವರಿ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾಲೋಚನ ಸಭೆಗೆ ತಾಲೂಕಿನ ಎಲ್ಲಾ ಮ್ಯಾಕೋಸ್ ಷೇರುದಾರು ಪಾಲುಗೊಳ್ಳಬೇಕಾಗಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.
ಗ್ರಾಪಂ ಚುನಾವಣೆ:
ರೇಣುಕಮ್ಮ ಆಯ್ಕೆ
ತರೀಕರೆ: ಸಮೀಪದ ಬೇಲೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಎ. ರಂಗಾಪುರ ಕ್ಷೇತ್ರದಿಂದ ಎನ್.ಆರ್. ರೇಣುಕಮ್ಮ ಅವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ವಿಜೇತ ಅಭ್ಯರ್ಥಿ ಎನ್.ಆರ್. ರೇಣುಕಮ್ಮ ಅವರನ್ನು ಶಾಸಕ ಜಿ.ಎಚ್. ಶ್ರೀನಿವಾಸ್ ಮತ್ತು ಎ.ರಂಗಾಪುರ ಗ್ರಾಮಸ್ಥರು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement