ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೇಂದ್ರ ಸರ್ಕಾರ ವಜಾಗೆ ಆಗ್ರಹಿಸಿ ಹೋರಾಟ

Lingaraj Badiger
Updated On : 14 Aug 2013, 10:54 am

ಚಿಕ್ಕಮಗಳೂರು: ಭ್ರಷ್ಟ ಕೇಂದ್ರ ಸರ್ಕಾರವನ್ನು ವಜಾಗೊಳಿಸುವಂತೆ ರಾಷ್ಟ್ರಪತಿಯವರನ್ನು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ಭ್ರಷ್ಟಾಚಾರ, ಜನ ವಿರೋಧಿ ಯೋಜನೆ ಹಾಗೂ ತುಷ್ಟೀಕರಣ ನೀತಿಯ ವಿರುದ್ಧ ಜನಜಾಗೃತಿ ಮೂಡಿಸಲು ಹೋರಾಟ ರೂಪಿಸಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
 ಕೇದ್ರದ ಯುಪಿಎ ಸರ್ಕಾರ ಹಲವಾರು ಹಗರಣಗಳ ಮೂಲಕ ಸುಮಾರು 12 ಲಕ್ಷ ಕೋಟಿಗೂ ಮೀರಿ ಭ್ರಷ್ಟಾಚಾರವನ್ನು ಮಾಡಿರುವುದು ಸಾಬೀತಾಗಿದೆ. ಈ ಭ್ರಷ್ಟಾಚಾರದಲ್ಲಿ ಕೇಂದ್ರ ಸರ್ಕಾರದ ಹಲವಾರು ಸಚಿವರು ಭಾಗಿಯಾಗಿರುವುದು ಸಾಬೀತಾಗಿದೆ. ಜತೆಗೆ ಕೇಂದ್ರ ಸರ್ಕಾರ ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ. ರುಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ. ಬಡತನ ನಿರಂತರವಾಗಿ ವೃದ್ಧಿಯಾಗುತ್ತಿದೆ. ಸರ್ಕಾರ ವಿದೇಶಿ ನೀತಿಯನ್ನು ರೂಪಿಸುವ ಕಾರ್ಯದಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದರ ಜತೆಗೆ ಆಂತರಿಕ ಸುರಕ್ಷೆ ಮತ್ತು ಬಾಹ್ಯ ಸುರಕ್ಷೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
 ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ವ್ಯಾಪಾರೀಕರಣ, ಭ್ರಷ್ಟಾಚಾರ ಮತ್ತು ಅರಾಜಕತೆಗೆ ಕೇಂದ್ರ ಸರ್ಕಾರವೇ ನೇರ ಹೊಣೆಯಾಗಿದೆ. ಕೇಂದ್ರ ಸರ್ಕಾರದ ಭ್ರಷ್ಟ ಮತ್ತು ಬೇಜವಬ್ದಾರಿ ನೀತಿಯ ಕಾರಣ ದೇಶಕ್ಕೆ ಆರ್ಥಿಕ ನಷ್ಟ ಜತೆಗೆ ವಿಕಾಸ ಕುಂಠಿತವಾಗಿದೆ. ಇದರಿಂದ ಜನ ಸಾಮಾನ್ಯರು ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಹೇಳಿದ್ದಾರೆ. ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರಲು ಕಾನೂನನ್ನು ರೂಪಿಸುವ ಮತ್ತು ಭ್ರಷ್ಟಚಾರಿಗಳ ಹೆಸರುಗಳನ್ನು ದೇಶದ ಮುಂದೆ ಬಹಿರಂಗಗೊಳಿಸುವ ಬೇಡಿಕೆಯನ್ನು ಎಬಿವಿಪಿ ನಿರಂತರವಾಗಿ ಸಲ್ಲಿಸುತ್ತಾ ಬಂದಿದೆ. ಜತೆಗೆ ದೇಶದ ವಿಕಾಸಕ್ಕೆ ಮಾರಕವಾಗುವ ವರ್ತಮಾನ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಬೇಕು. ನ್ಯಾಯಾಂಗದಲ್ಲಿ ಸುಧಾರಣೆ, ಚುನಾವಣಾ ಪದ್ಧತಿಯಲ್ಲಿ ಸುಧಾರಣೆ, ಆಡಳಿತ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆಯ ಜತೆಗೆ ಶಿಕ್ಷಣ ವ್ಯವಸ್ಥೆಯಲ್ಲೂ ಸುಧಾರಣೆ ತರಬೇಕು ಎಂದು ಆಗ್ರಹಿಸಿದ್ದಾರೆ.
 ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಸಂತೋಷ್ ಕೋಟ್ಯಾನ್, ನಗರ ಕಾರ್ಯದರ್ಶಿ ದರ್ಶನ್ ಹಿರೇಮಠ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement