ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜಗದ್ಗುರು ರೇಣುಕಾಚಾರ್ಯರ ಸಂದೇಶ ದಾರಿದೀಪ

Lingaraj Badiger
Updated On : 14 Aug 2013, 10:54 am

ಬಾಳೆಹೊನ್ನೂರು: ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸಿದ ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳನ್ನು ಬೋಧಿಸಿದ್ದಾರೆ. ಜಾತಿ ಜಂಜಡಗಳ ಬೇರು ಕಿತ್ತೊಗೆದು ಮಾನವೀಯ ಸಂಬಂಧಗಳನ್ನು ಬೆಳೆಸಿದ್ದಾರೆ. ಅವರು ಕೊಟ್ಟ ಅಧ್ಯಾತ್ಮ ಸಂದೇಶದ ಸುಧೆ ಸಕಲರಿಗೂ ದಾರಿದೀಪವೆಂದು ರಂಭಾಪುರೀ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
 ಇಲ್ಲಿನ ರಂಭಾಪುರಿ ಪೀಠದಲ್ಲಿ ಮದ್ವೀರಶೈವ ಸದ್ಬೋಧನ ಸಂಸ್ಥೆ ಪ್ರಸಾರಾಂಗದಿಂದ ಸೋಮವಾರ ಆಯೋಜಿಸಿದ್ದ ಶ್ರಾವಣ ವಿಶೇಷ ಉಪನ್ಯಾಸ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಾನವ ಜೀವನ ಸುಖ ದುಃಖಗಳಿಂದ ಕೂಡಿದೆ. ಸುಖದ ನಂತರ ದುಣಖ ಹಾಗೂ ದುಃಖದ ನಂತರ ಸುಖದ ಚಕ್ರ ತಿರುಗುತ್ತಲೇ ಇರುತ್ತದೆ. ಸುಖದ ಮೂಲ ಧರ್ಮದಲ್ಲಿ ಇದೆ ಎಂದು ಅರಿತು ಪರಿಪಾಲಿಸುವವನ ಜೀವನ ಉಜ್ವಲಗೊಳ್ಳುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಿದ್ದನ್ನು ಮರೆಯಲಾಗದು. ರಕ್ತ ರಹಿತ ಸಾತ್ವಿಕ ಕ್ರಾಂತಿಯ ಮೂಲಕ ಅಧ್ಯಾತ್ಮದ ಅಮೃತ ವಿಚಾರಗಳನ್ನು ಬೋಧಿಸಿ ಧರ್ಮ ವಾಹಿನಿಯತ್ತ ಕರೆತಂದ ಸಂದರ್ಭಗಳನ್ನು ಮರೆಯಲಾಗದೆಂದು ತಿಳಿಸಿದರು.
 ಶ್ರೀ ಜಗದ್ಗುರು ರೇಣುಕಾಚಾರ್ಯರು ಎಂಬ ವಿಷಯವಾಗಿ ಉಪನ್ಯಾಸ ನೀಡಿದ ದೊಡ್ಡಸಾಗರದ ಸೋಮೇಶ್ವರ ಶಿವಾಚಾರ್ಯರು ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ಮಾಡಿದ ಕ್ರಾಂತಿ ಸಾಮಾನ್ಯವಾದುದಲ್ಲ. ಅವರು ಯುಗಪುರುಷರಾಗಿ ಐತಿಹಾಸಿಕ ಮಹಾನ್ ಪುರುಷರಾಗಿ ಧರ್ಮ ಸಂಸ್ಕೃತಿ ಬೆಳೆಸಿದ ದಿವ್ಯ ಶಕ್ತಿ ಎಂದರು.
 ಈ ಸಂದರ್ಭದಲ್ಲಿ ಸಾಹಿತಿ ಡಾ. ಜಚನಿ ವಿರಚಿತ ರೇಣುಕ ಗೀತೆ ಸಾಹಿತ್ಯ ಕೃತಿ ಬಿಡುಗಡೆಯನ್ನು ಮಾಡಲಾಯಿತು. ಹಲಗೂರು ಬೃಹನ್ಮಠದ ರುದ್ರಮುನಿ ಶಿವಾಚಾರ್ಯ ಜಗದ್ಗುರು ರೇಣುಕ ವಿಜಯ ಪ್ರವಚನ ಮಾಡಿ ನಂಬಿ ನಡೆದವರ ಬಾಳಿನಲ್ಲಿ ರೇಣುಕರು ಇಂದಿಗೂ ಲೀಲೆಗೈದು ಉದ್ಧರಿಸುವರು. ನಂಬಿಗೆ, ವಿಶ್ವಾಸ ಶೃದ್ಧೆ ಬೆಳೆಸುವುದೇ ಆಚಾರ್ಯರ ಗುರಿ ಎಂದರು.
 ಚಿತ್ರದುರ್ಗದ ಹಾಸ್ಯ ಸಾಹಿತಿ ಟಿ. ಜಗನ್ನಾಥ ಹಾಸ್ಯ ಚಟಾಕಿಗಳನ್ನು ಹಾರಿಸುವ ಮೂಲಕ ಸಭಿಕರನ್ನು ರಂಜಿಸಿದರು.
 ಬಾಳೆಹೊನ್ನೂರಿನ ರಂಭಾಪುರೀ ಪೀಠದಲ್ಲಿ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಪ್ರಸಾರಾಂಗದಿಂದ ಆಯೋಜಿಸಿದ ಶ್ರಾವಣ ವಿಶೇಷ ಉಪನ್ಯಾಸ ಸಮಾರಂಭದಲ್ಲಿ ರಂಭಾಪುರೀ ಜಗದ್ಗುರುಗಳು ಸಾಹಿತಿ ಡಾ. ಜಚನಿ ವಿರಚಿತ ರೇಣುಕ ಗೀತೆ ಸಾಹಿತ್ಯ ಕೃತಿ ಬಿಡುಗಡೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement