ಮಳೆ ಹಾನಿ ಪ್ರದೇಶಕ್ಕೆ ಶಾಸಕ ಜೀವರಾಜ್ ಭೇಟಿ
ಕ.ಪ್ರ.ವಾರ್ತೆ, ಕೊಪ್ಪ, ಆ.13
ತಾಲೂಕಿನ ಹರಿಹರಪುರ ಹೋಬಳಿಯಲ್ಲಿ ಅತಿವೃಷ್ಟಿಯಿಂದ ಹಾನಿಯಾದ ರೈತರ ತೋಟಗಳಿಗೆ ಶಾಸಕ ಡಿ.ಎನ್. ಜೀವರಾಜ್ ಮಂಗಳವಾರ ಭೇಟಿ ನೀಡಿ, ಹಾನಿಯಾದ ತೋಟಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಪ್ರಯತ್ನ ಮಾಡುವುದಾಗಿ ರೈತರಿಗೆ ಭರವಸೆ ನೀಡಿದರು.
ಕಾರಂಗಿ ಬಾಲರಾಜ್ ಅವರ ತೋಟದ ಸಮೀಪದಲ್ಲಿ ಸುಮಾರು 25 ಎಕರೆ ಕೃಷಿ ಭೂಮಿಗೆ ನೀರುಣಿಸುವ ಕಾಲುವೆ ಮಳೆಗೆ ಕೊಚ್ಚಿಕೊಂಡು ಹೋಗಿ ಈ ಭಾಗದಲ್ಲಿರುವ ಸುಮಾರು 20 ಸಣ್ಣರೈತರ ತೋಟಗಳಿಗೆ ನೀರು ನುಗ್ಗಿದ ಪರಿಣಾಮ ಅಡಿಕೆ ಮರಗಳು ಬುಡಮೇಲಾಗಿ ಬಿದ್ದು, ಹಾನಿ ಸಂಭವಿಸಿದ್ದು, ಕಾಲುವೆ ನಿರ್ಮಾಣಕ್ಕೆ ಮತ್ತು ಹಾನಿಯಾದ ತೋಟಗಳಿಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ವಿವಿಧೆಡೆ ಭೇಟಿ: ಮಾವಿನಕಟ್ಟೆ ಬಳಿ ಬಾಲನಕೊಪ್ಪ ಶೇಷಾದ್ರಿ ಭಟ್ ಅವರ ಮನೆಯ ಹಿಂದಿನ ಗುಡ್ಡ ಕುಸಿದ ಪರಿಣಾಮ ಹಿತ್ಲುಮನೆ ಸಂಪೂರ್ಣಹಾನಿಯಾಗಿದ್ದ ಪ್ರದೇಶಕ್ಕೆ ಹಾಗೂ ಶಾನುವಳ್ಳಿ ಶೇಖರ್ ಅವರ ಅಡಿಕೆ ತೋಟ ಹಾಗೂ ಸೂರ್ಳಿಯಲ್ಲಿ ವಿವಿಧ ಅಡಿಕೆ ತೋಟಗಳಿಗೆ ಭೇಟಿ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದ ಬಹುತೇಕ ಭಾಗದಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಅಡಕೆ ಬೆಳೆಗಾರಿಗೆ ಮೈಲುತುತ್ತ ಮತ್ತು ಎಕರೆಗೆ 15,000 ಪರಿಹಾರ ನೀಡಬೇಕು. ಭೂ ಕುಸಿತದಿಂದ ಹಾನಿಯಾದ ರಸ್ತೆ, ಸೇತುವೆ ದುರಸ್ತಿಗೆ ಶೀಘ್ರ ಹಣ ಮಂಜೂರು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದರು.
ಸುಚಿತಾ ನರೇಂದ್ರ, ರಾಮಸ್ವಾಮಿ, ಬಿ.ಸಿ. ನರೇಂದ್ರ ಹಾಜರಿದ್ದರು.