ವಿಪತ್ತು ಸಂಭವಿಸಿದಾಗ ಧೈರ್ಯಗೆಡದಿರಿ
ಕ.ಪ್ರ.ವಾರ್ತೆ, ತರೀಕೆರೆ, ಆ.13
ವಿಪತ್ತು ಸಂಭವಿಸಿದಾಗ ಧೈರ್ಯಗೆಡದೆ ಅವುಗಳನ್ನು ಸಮರ್ಪಕವಾಗಿ ವಿರ್ವಹಿಸಬೇಕು ಎಂದು ಸೌತ್ ಏಷಿಯಾ ರೀಜನಲ್ ಡಿಸಾಸ್ಟರ್ ಸದಸ್ಯರು, ವಿಪತ್ತು ನಿರ್ವಹಣೆಯ ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿ ಡಾ.ವಿ.ಎಲ್.ಎಸ್. ಕುಮಾರ್ ತಿಳಿಸಿದ್ದಾರೆ.
ಅವರು, ಪಟ್ಟಣದ ಎಸ್.ಜೆ.ಎಂ. ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್, ಭಾರತ್ ಸ್ಕೌಟ್ಸ್ ಗೈಡ್ಸ್ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿಪತ್ತು ನಿರ್ವಹಣೆ ಮತ್ತು ಜಿನಿವಾ ಒಪ್ಪಂದದ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಮಾನವೀಯತೆ ಮೆರೆಯಿರಿ: ನೈಸರ್ಗಿಕ ವಿಪತ್ತುಗಳಾದ ಭೂಕಂಪ, ಜಲಪ್ರಳಯ, ಚಂಡಮಾರುತ ಸುನಾಮಿ ಮತ್ತು ಮಾನವ ನಿರ್ಮಿತ ವಿಪತ್ತುಗಳಾದ ಜನಾಂಗೀಯ ಕಲಹ, ರಸ್ತೆ ಅಪಘಾತ, ಅಗ್ನಿ ದುರಂತ ಇತ್ಯಾದಿಗಳು ಸಂಭವಿಸಿದಾಗ ವಿದ್ಯಾರ್ಥಿಗಳು ಸಂತ್ರಸ್ತರನ್ನು ಸಂರಕ್ಷಿಸುವ ಮೂಲಕ ಮಾನವೀಯತೆ ಮೆರೆಯಬೇಕು ಎಂದ ಅವರು ಇತ್ತೀಚೆಗೆ ಉತ್ತರಾಖಂಡದ ಜಲಪ್ರಳಯದಲ್ಲಿ ಅವರು ಕೈಗೊಂಡ ಪರಿಹಾರ ಕಾರ್ಯಗಳ ಬಗ್ಗೆ ತಿಳಿಸಿದರು.
ಕುವೆಂಪು ವಿ.ವಿ.ಯ ರೆಡ್‌ಕ್ರಾಸ್ ಸಂಸ್ಥೆ ಸಮನ್ವಯಾಧಿಕಾರಿ ಡಾ. ಅಪ್ಪಣ್ಣ ಎಂ. ಗಸ್ತಿ ಅವರು ಕಾರ್ಯಾಗಾರ ಉದ್ಘಾಟಿಸಿ, ತಟಸ್ಥತೆ, ನಿಷ್ಪಕ್ಷಪಾತತೆ, ಸ್ವತಂತ್ರ ಸೇವೆ, ವಿಶ್ವವ್ಯಾಪಕತೆ ಇತ್ಯಾದಿ ತತ್ವಗಳ ಹಿನ್ನೆಲೆಯಲ್ಲಿ ರಚಿತವಾದ ಯುವ ರೆಡ್‌ಕ್ರಾಸ್ ಸಮುದಾಯ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಇಂತಹ ಸಮಾಜಮುಖಿ ಕಾರ್ಯದಲ್ಲಿ ಎಲ್ಲರೂ ಭಾಗಿಗಳಾಗಬೇಕು ಎಂದು ಅವರು ತಿಳಿಸಿದರು.
ಶಿಸ್ತು ಬೆಳೆಸುತ್ತದೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಚಿಕ್ಕಮಗಳೂರು ಜಿಲ್ಲಾ ಸಂಘಟಕ ಬಿ.ಎಸ್. ಕಿರಣ್ ಕುಮಾರ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸುತ್ತದೆ. ಮತ್ತು ಸಮಾಜದಲ್ಲಿ ನಡೆಯುವ ವಿಪತ್ತುಗಳನ್ನು ವಿದ್ಯಾರ್ಥಿಗಳು ಹೇಗೆ ಎದುರಿಸಬೇಕು ಎಂದು ತಿಳಿಸಿದರು.
ರೆಡ್‌ಕ್ರಾಸ್ ಸಂಸ್ಥೆ ಕಾರ್ಯಕ್ರಮಾಧಿಕಾರಿ ಪ್ರೊ. ಕೆ.ಆರ್. ವೀರೇಶ್ ಕಾರ್ಯಕ್ರಮದ ಧ್ಯೇಯೋದ್ದೇಶ, ಜಿನಿವಾ ಒಪ್ಪಂದದ ಮುಖ್ಯ ತತ್ವ ಕುರಿತು ಮಾತನಾಡಿದರು.
ಪ್ರಾಚಾರ್ಯ ಪ್ರೊ. ಕೆ.ವಿ. ಸಜ್ಜನ್ ಶೆಟ್ಟರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಬಿ.ಇ. ಕುಮಾರಪ್ಪ, ಪ್ರೊ. ಪಿ.ಲಿಂಗಪ್ಪ ಮೊದಲಾದವರು ಉಪಸ್ಥಿತರಿದ್ದರು.
ಉತ್ತರಾಖಂಡದಲ್ಲಿ ಸಂಭವಿಸಿದ ಜಲಪ್ರಳಯ ಮತ್ತು ಕೈಗೊಂಡ ಪರಿಹಾರ ಕಾರ್ಯಗಳ ಸಾಕ್ಷ್ಯ ಚಿತ್ರವನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ 200 ವಿದ್ಯಾರ್ಥಿಗಳು ಭಾಗವಹಿಸಿ ವಿಪತ್ತು ನಿರ್ವಹಣೆ ಕುರಿತು ಸಂಪನ್ಮೂಲ ವ್ಯಕ್ತಿಗಳೊಡನೆ ಸಂವಾದ ನಡೆಸಿದರು. ಪ್ರೊ. ಮೇಲ್ಮಾಳಗಿ ಸ್ವಾಗತಿಸಿದರು.