ಕೊಳೆ ರೋಗ; ಪರಿಹಾರಕ್ಕೆ ಮನವಿ
ಬಾಳೆಹೊನ್ನೂರು: ಕಳೆದ ಎರಡು ತಿಂಗಳಿನಿಂದ ನಿರಂತರ ಸುರಿದ ಧಾರಾಕಾರ ಮಳೆಗೆ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಗೆ ಕೊಳೆ ರೋಗ ಬಾಧಿಸಿದ್ದು, ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಶೃಂಗೇರಿ ಕ್ಷೇತ್ರದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಶೇಖರಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಇತ್ತೀಚೆಗೆ ಸುರಿದ ಭಾರೀ ಮಳೆಗೆ ಭೂ ಕುಸಿತ ಸಂಭವಿಸಿದ ಸಮೀಪದ ಮೇಗುಂದಾ ಹೋಬಳಿಯ ವಿವಿಧ ಪ್ರದೇಶಗಳಿಗೆ ಭೇಟಿ ಪರಿಶೀಲಿಸಿದ ಬಳಿಗೆ ಪಟ್ಟಣದ ನಾಡ ಕಚೇರಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ತಾವು ತಂದಿದ್ದ ಕೊಳೆ ರೋಗದಿಂದ ಉದುರಿದ ಅಡಕೆ ಹಾಗೂ ಗೊನೆಗಳನ್ನು ಅವರಿಗೆ ಪ್ರದರ್ಶಿಸಿ ಮನವಿ ಸಲ್ಲಿಸಿದರು.
ಫಸಲು ಸಂಪೂರ್ಣ ನಾಶ: ಮಲೆನಾಡಿನಾದ್ಯಂತ ಈ ವರ್ಷ ಮಿತಿಮೀರಿದ ಮಳೆಯಿಂದ ಅಡಕೆಗೆ ಕೊಳೆ ರೋಗ ವ್ಯಾಪಕವಾಗಿ ಹರಡಿದ್ದು, ಅದನ್ನು ನಿಯಂತ್ರಿಸಲು ಸಾಧ್ಯವಾಗದೇ ಫಸಲು ಸಂಪೂರ್ಣ ನಾಶವಾಗಿದೆ. ಈ ಭಾಗದಲ್ಲಿ ಅಡಕೆಯ ಜೊತೆಗೆ ಉಪ ಬೆಳೆಯಾಗಿದ್ದ ಕಾಫಿ, ಕಾಳುಮೆಣಸು ಸಹ ಕೊಳೆ ರೋಗದಿಂದ ನಾಶವಾಗಿದೆ.
ಪರಿಹಾರ: ಶೇ.80 ರಷ್ಟು ಫಸಲು ಈಗಾಗಲೇ ಉದುರಿ ಹೋಗಿದ್ದು, ಉಳಿದಿರುವ ಅಲ್ಪಸ್ವಲ್ಪ ಫಸಲು ನಾಶದ ಹಂತದಲ್ಲಿದೆ. ಅಡಕೆಯನ್ನೇ ಜೀವನಾಧಾರವಾಗಿ ನಂಬಿ ಬದುಕುತ್ತಿದ್ದ ರೈತರ ಬದುಕು ಬೀದಿಪಾಲಾಗಿದೆ. ಸರ್ಕಾರದಿಂದ ಇದಕ್ಕೆ ಪರಿಹಾರ ದೊರೆಯದೇ ಹೋದಲ್ಲಿ ರೈತರಿಗೆ ಆತ್ಮಹತ್ಯೆಯೊಂದೇ ದಾರಿಯಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಅದಲ್ಲದೇ ಪ್ರವಾಹದಿಂದ ಹಲವು ಗ್ರಾಮೀಣ ಪ್ರದೇಶಗಳ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಬತ್ತದ ಗದ್ದೆಗಳಿಗೆ ನೀರು ಹಾಯಿಸುವ ಕಾಲುವೆಗಳು ಕೊಚ್ಚಿಕೊಂಡು ಹೋಗಿವೆ ಎಂದು ಮನವಿಯಲ್ಲಿ ತಿಳಿಸಿದರು. ಜಿಲ್ಲಾಧಿಕಾರಿ ಶೇಖರಪ್ಪ ರೈತರಿಂದ ಮನವಿ ಪಡೆದು ಪ್ರತಿಕ್ರಿಯಿಸಿ, ಅತಿವೃಷ್ಟಿ ಪ್ರದೇಶಗಳಿಗೆ ಹಾಗೂ ಕೊಳೆ ರೋಗ ಪೀಡಿತ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸೂಕ್ತ ಪರಿಹಾರ ಹಾಗೂ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರ ರೈತ ಸಂಘದ ಅಧ್ಯಕ್ಷ ಸತೀಶ್ ಕೆಳಕೊಪ್ಪ, ಕೊಪ್ಪ ತಾಲೂಕು ರೈತ ಸಂಘದ ಅಧ್ಯಕ್ಷ ನವೀನ್ ಕರುವಾನೆ, ರೈತ ಸಂಘ ಹಾಗೂ ಹಸಿರುಸೇನೆಯ ಮುಖಂಡರಾದ ಚಿಂತನ್ ಬೆಳಗೊಳ, ರವೀಂದ್ರ, ಡಿ.ಬಿ. ರಾಜೇಂದ್ರ, ಎಂ.ಎಸ್. ಚನ್ನಕೇಶವ್, ಕಮಾಲಿಯಾ, ಗಣೇಶ್, ಇದ್ದರು.
ಭೂ ಕುಸಿತ ಪ್ರದೇಶಕ್ಕೆ ಭೇಟಿ: ಜಿಲ್ಲಾಧಿಕಾರಿ ಶೇಖರಪ್ಪ ಅವರು ಮೇಗುಂದಾ ಹೋಬಳಿಯ ಭೂ ಕುಸಿತ ಪ್ರದೇಶಗಳಾದ ಚನ್ನೇಕಲ್ಲು, ಗುಡ್ಡೇತೋಟದ ಗುಂಡಪ್ಪಮೈದಾನ, ಮೆಣಸಿನಹಾಡ್ಯ-ಕೊಗ್ರೆ ಸಮೀಪದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ಕೊಪ್ಪ ತಹಸೀಲ್ದಾರ್ ಶ್ರೀಧರಮೂರ್ತಿ ಪಂಡಿತ್, ಉಪ ತಹಸೀಲ್ದಾರ್ ಶೇಷಮೂರ್ತಿ, ತಾಂಡವ ಮೂರ್ತಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ನಾಗರಾಜ್ ಇದ್ದರು.