ಛಾಯಾಚಿತ್ರ, ಸಂಗ್ರಹ ಲೇಖನ ಪ್ರದರ್ಶನ
ಬಾಳೆಹೊನ್ನೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಲ್ಲಿಗೆ ಸಮೀಪದ ಸಿಆರ್ಎಸ್ನ ಕಾಫಿ ಸಂಶೋಧನಾ ಕೇಂದ್ರದಲ್ಲಿ ಅಲ್ಲಿನ ಸೀನಿಯರ್ ಕಾಂಪೌಂಡರ್ (ಫಾರ್ಮಸಿಸ್ಟ್) ಸೇತುರಾಯ್ ಅವರು ರಚಿಸಿದ ವಿವಿಧ ಛಾಯಾಚಿತ್ರ ಹಾಗೂ ಸಂಗ್ರಹದ ಹಲವು ಲೇಖನಗಳನ್ನು ಬುಧವಾರ ಪ್ರದರ್ಶಿಸಲಾಯಿತು.
ಪ್ರದರ್ಶನದಲ್ಲಿ ಪ್ರಮುಖವಾಗಿ ಅವರು ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ರಚಿಸಿದ ಗ್ಲಾಸ್ ಪೇಟಿಂಗ್, ಕ್ರಯಾನ್ ವರ್ಕ್ಸ್, ಕ್ರಾಫ್ಟ್ ವರ್ಕ್ಸ್, ಬಾಲ್ ಪೆನ್ ಡ್ರಾಯಿಂಗ್, ಆರೋಗ್ಯದ ಕಾಳಜಿ ಕುರಿತ ಚಿತ್ರಗಳು, ನಗುವಿನ ಮಹತ್ವದ ಲೇಖನಗಳು, ಚಿತ್ರಗಳು, ನಾಣ್ಯಗಳ ಸಂಗ್ರಹ, ಸ್ಮೋಕ್ ವರ್ಕ್ ಡ್ರಾಯಿಂಗ್, ಸ್ವಾತಂತ್ರ್ಯ ಹೋರಾಟಗಾರರ ವಿವಿಧ ಚಿತ್ರಗಳು, ಬಡವ ಶ್ರೀಮಂತರ ನಡುವಿನ ವ್ಯತ್ಯಾಸದ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಅದಲ್ಲದೇ ಕಳೆದ ತಿಂಗಳು ಅಂತ್ಯಗೊಂಡ ಭಾರತದ 163 ವರ್ಷಗಳ ಹಳೆಯ ಸೇವೆಯಾದ ಟೆಲಿಗ್ರಾಂನ ಕೊನೆಯ ಪ್ರತಿಯನ್ನು, ಕೇರಳದ ಕೊಲ್ಲಂನಿಂದ ತಮ್ಮ ಪತ್ನಿಗೆ ಕಳುಹಿದ ಪತ್ರ ಪ್ರದರ್ಶನದಲ್ಲಿತ್ತು.
ದೋಷಪೂರಿತ ಸುದ್ದಿಗಳ ಸಂಗ್ರಹ: ರಾಜ್ಯದ ವಿವಿಧ ಕನ್ನಡ ಹಾಗೂ ಆಂಗ್ಲ ದಿನಪತ್ರಿಕೆಗಳಲ್ಲಿ ಕಣ್ತಪ್ಪಿನಿಂದಾಗಿ ದೋಷಪೂರಿತವಾಗಿ ಮುದ್ರಣಗೊಂಡಿರುವ ಹಲವು ಸುದ್ದಿಗಳ ಸಂಗ್ರಹವನ್ನೂ ಇವರು ಮಾಡಿದ್ದಾರೆ. ಒಂದೇ ದಿನ ಬೇರೆ ಬೇರೆ ಪುಟಗಳಲ್ಲಿ ಒಂದೇ ಸುದ್ದಿ ಪ್ರಕಟಗೊಂಡಿರುವುದು, ಇಂದು ಪ್ರಕಟಗೊಂಡ ಸುದ್ದಿ ನಾಳೆ ಪುನಃ ಪ್ರಕಟಗೊಂಡಿರುವುದು, ಕ್ರಿಕೆಟ್ ಸ್ಕೋರ್ ವಿವರದಲ್ಲಿ ಒಂದೇ ತಂಡದ ಸ್ಕೋರ್ ಪ್ರಕಟಗೊಂಡಿರುವುದು ಹಾಗೂ ಯಾವುದೋ ಚಿತ್ರಕ್ಕೆ ಇನ್ನಾವುದೋ ವರದಿ ಪ್ರಕಟಗೊಂಡಿರುವುದನ್ನು ಸಂಗ್ರಹ ಮಾಡಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.
ಚಿತ್ರ ಪ್ರದರ್ಶನದ ಕುರಿತು ಸೇತುರಾಯ್ ಮಾತನಾಡಿ, ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಈ ಹವ್ಯಾಸವನ್ನು ರೂಢಿಸಿಕೊಂಡಿದ್ದು, ಪತ್ನಿ ರೇಖಾ ಹಾಗೂ ಪುತ್ರಿ ಉಮಾ ಅವರ ಪ್ರೇರಣೆಯೇ ನನಗೆ ಸಾಧನೆಯಾಗಿದೆ. ಸ್ವಾತಂತ್ರ್ಯೋತ್ಸವದ ಗುರುವಾರದವರೆಗೆ ಪ್ರದರ್ಶನವಿದ್ದು, ಆಸಕ್ತರು ವೀಕ್ಷಿಸುವಂತೆ ಕೋರಿದ್ದಾರೆ.
ಕಾಫಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜಯರಾಂ, ಡಾ. ಸುಧಾಕರ ಭಟ್, ಸಿ.ಜಿ. ಆನಂದ, ಸೂರ್ಯಪ್ರಕಾಶ್ ಅವರು ಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದರು.