ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸುಸಂಸ್ಕೃತ ಪದ್ಧತಿಗಳಿಂದ ದೂರ; ವಿಷಾದ

Vishwanath S
Updated On : 15 Aug 2013, 11:51 am

ಕ.ಪ್ರ.ವಾರ್ತೆ ,  ಚಿಕ್ಕಮಗಳೂರು ,  ಆ.14
ಬೌದ್ಧಿಕವಾಗಿ ಪ್ರಬುದ್ಧರಾದಂತೆ ನಮ್ಮ ಆಚಾರ ವಿಚಾರ, ಉಡುಗೆ, ತೊಡುಗೆಗಳು ಹಾಗೂ ಸುಸಂಸ್ಕೃತ ಪದ್ಧತಿಗಳಿಂದ ದೂರಾಗುತ್ತಿರುವುದು ವಿಷಾಧದ ಸಂಗತಿ ಎಂದು ಸಂಸ್ಕಾರ ಭಾರತಿ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ನಗರದ ಹೊರವಲಯದ ಸಿರಗಾಪುರದಲ್ಲಿರುವ ಸಾಯಿ ಏಂಜಲ್ಸ್ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಮತ್ತು ನೂತನ ಕಟ್ಟಡದ ಸ್ಥಳಾಂತರ ಸಮಾರಂಭದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.
ನಿಯಂತ್ರಣ ಇರಲಿ: ಹೆಚ್ಚು ವಿದ್ಯಾವಂತರಾದಂತೆ ಸೂತ್ರ ಹರಿದ ಗಾಳಿ ಪಟದಂತಾಗಬಾರದು. ಪಟದ ನಿಯಂತ್ರಣ ನಮ್ಮಲ್ಲಿಯೇ ಇರಬೇಕು. ಮಕ್ಕಳು ಎಲ್ ಕೆಜಿಗೆ ಕಾಲಿಡುತ್ತಿದ್ದಂತೆ ಉಡುಗೆ ತೊಡುಗೆಗೆ ನಿಯಮಗಳು ಬಂದು ಬಿಡುತ್ತವೆ. ಪ್ರೌಢಶಾಲೆಗೆ ಕಾಲಿಡುತ್ತಿದ್ದಂತೆ ಕನ್ನಡಿಗರಾದರೂ ಕನ್ನಡ ಮಾತನಾಡಲು ಬಾರದವರ ರೀತಿ ಕನ್ನಡ ಮಾತನಾಡಲು ನಾಚಿಕೆ ಪಟ್ಟುಕೊಳ್ಳುತ್ತೇವೆ ಎಂದರು.
ವರ್ಗೀಯ ವ್ಯಂಜನ: ಮನಸ್ಸು ಹಾಗೂ ಹೃದಯದ ಭಾವನೆಗಳನ್ನು ಅರ್ಥೈಸಿಕೊಳ್ಳಲು ಕನ್ನಡ ಭಾಷೆಯಿಂದ ಮಾತ್ರ ಸಾಧ್ಯ. ಕನ್ನಡ ಭಾಷೆಗೂ ವಿಜ್ಞಾನಕ್ಕೂ ಸಂಬಂಧವಿದೆ. ನಮ್ಮ ಕನ್ನಡದ ಅಕ್ಷರ ಮಾಲೆಯೇ ಒಂದು ಅದ್ಭುತ ಸಂಯೋಜನೆ ನಾಲಿಗೆ, ತುಟಿ, ಕಂಠದ ಕ್ರಿಯೆಯಿಂದ ಪದಗಳು ಹೊರಹೊಮ್ಮುವ ಅದೊಂದು ವೈಜ್ಞಾನಿಕ ಸಂಶೋಧನೆ, ಅದಕ್ಕಾಗಿ ವರ್ಣಮಾಲೆಯನ್ನು ವರ್ಗೀಯ ವ್ಯಂಜನ ಎಂದು ಕರೆಯುತ್ತಾರೆ. ಆದರೆ, ಇಂಗ್ಲಿಷ್ ಅವರ್ಗೀಯ ವ್ಯಂಜನ ಎಂದು ವಿದ್ಯಾರ್ಥಿಗಳ ಮನಮುಟ್ಟುವಂತೆ ಬಿಡಿಸಿಟ್ಟರು.
ಭಾರತ ದೀಪ: ಅಜ್ಞಾನದಿಂದ ಜ್ಞಾನದೆಡೆಗೆ ಎಂಬ ಸಿದ್ಧಾಂತವನ್ನು 10 ಸಾವಿರ ವರ್ಷಗಳ ಹಿಂದೆಯೇ ನಮ್ಮ ಋಷಿಮುನಿಗಳು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಭಾರತಿಯರಿಗೆ ಅಷ್ಟೊಂದು ತಿಳುವಳಿಕೆ ಇತ್ತು. ಸರ್ವೇಜನೋ ಸುಖೀನೋಭವಂತು ಎಂಬ ಸಂದೇಶ ಸಾರಿ ಸಕಲ ಜೀವ ಜಂತುಗಳು ಸುಖವಾಗಿರಲೆಂದು ಬಯಸಿದವರು ಭಾರತೀಯರು. ಜಗತ್ತಿನ ಅಜ್ಞಾನ ಅಳಿಸಿ ಜ್ಞಾನದ ಬೆಳಕು ಕಾಣಲು ಸದಾ ಭಾರತ ದೀಪವಾಗಿ ಪಾತ್ರವಹಿಸಿದೆ ಎಂದರು.
ಭಾವ, ರಾಗ, ತಾಳಗಳ ಸಮ್ಮಿಶ್ರಣವೇ ಭಾರತ. ಜಗತ್ತಿನ ಎಲ್ಲಾ ದೇಶಗಳು ನಮ್ಮ ಮೇಲೆ ಆಕ್ರಮಣ ನಡೆಸಿವೆ. ಚಿಕ್ಕ ಪುಟ್ಟ ದೇಶಗಳು ದಾಳಿ ನಡೆಸಿವೆ. ಇಷ್ಟರ ನಡುವೆಯೂ ಭಾರತ ಗಟ್ಟಿಯಾಗಿ ನಿಂತಿದೆ. ಸ್ವಾತಂತ್ರ್ಯಾ ನಂತರವೂ ಎಲ್ಲಾ ಆಕ್ರಮಣಗಳನ್ನು ಹಿಮ್ಮೆಟ್ಟಿಸಿರುವ ದೇಶ ನಮ್ಮದು ಎಂದು ಹೇಳಿದರು.
ಭಾರತ ಇಲ್ಲದಿರುವ ಜಗತ್ತನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಮಟ್ಟಕ್ಕೆ ನಾವು ಬೆಳೆದಿದ್ದೇವೆ. ಭೂ ಮಂಡಲದಲ್ಲಿ ಭಾರತ ದೇಶವೇ ಇಲ್ಲ ಎಂದು ಪ್ರತಿಪಾಧಿಸಿದ್ದ ಅಲೆಕ್ಸಾಂಡರ್ ತಲೆ ತಗ್ಗಿಸಿದ್ದರು ಎಂದ ಅವರು, ನಮ್ಮಲ್ಲಿ ದುಡ್ಡಿನ ಹಿಂದೆ ಓಡುವವರ ಸಂಖ್ಯೆ ಹೆಚ್ಚು. ದುಡ್ಡೇ ಸಾಮ್ರಾಜ್ಯ ಎಂದುಕೊಂಡವರು ಒಮ್ಮೊಮ್ಮೆ ಹುಲ್ಲು ಕಡ್ಡಿ ದುಡ್ಡಿನ ಸಾಮ್ರಾಜ್ಯಕ್ಕೆ ಸಮನಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಜಗತ್ತಿನ ಎಲ್ಲಾ ವಿಜ್ಞಾನದ ಬುಡ ಭಾರತದಲ್ಲಿದೆ. ಅದರ ಫಲವನ್ನು ಇಡೀ ಜಗತ್ತು ತಿನ್ನುತ್ತಿದೆ. ಇದರ ವೈಜ್ಞಾನಿಕ ಸತ್ಯಗಳನ್ನು ಒಪ್ಪಲು ಇತರೆ ದೇಶಗಳು ತಯಾರಿಲ್ಲ ಎಂದರು.
 ಲೆಕ್ಕದ ಲೋಕಕ್ಕೆ ಭಾರತ ಸೊನ್ನೆಯನ್ನು ಕೊಡದಿದ್ದರೆ ಲೆಕ್ಕಾಚಾರ ಹಾಕಲು ಬರುತ್ತಿರಲಿಲ್ಲ. ಈ ಕಾರಣಕ್ಕೆ ಸೊನ್ನೆ ದೇಶದ ಆಧ್ಯಾತ್ಮ. 10 ಸಾವಿರ ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ವಿಜ್ಞಾನದ ಬಹಳಷ್ಟು ಮಹತ್ವಗಳನ್ನು ಜಗತ್ತಿಗೆ ತಿಳಿಸಿದ್ದಾರೆ. ಅವರ ಶಕ್ತಿಕಂಡು ವಿಶ್ವವೇ ಬೆರಗಾಗಿತ್ತು ಎಂದು ಹೇಳಿದರು.
ಎಂಜಿನಿಯರ್, ಡಾಕ್ಟರ್‌ಗಳಾಗಿ ಕೆಲಸ ಮಾಡುವುದು ದೊಡ್ಡದಲ್ಲ. ರಾಷ್ಟ್ರ ಕಟ್ಟುವ ಕನಸು ನಮ್ಮದಾಗಬೇಕು. ಜಗತ್ತಿನ ಯಾವ ರಾಷ್ಟ್ರಕ್ಕಿಂತ ಗುಲಗಂಜಿಯಷ್ಟು ಕಡಿಮೆ ಇರುವ ದೇಶ ನಮ್ಮದಲ್ಲ. ಜೀವನ ಶ್ರೇಷ್ಠ ಆದರ್ಶ ಇರುವ ಮಾದರಿ ನಮ್ಮದಾದಾಗ ಜೀವನ ಸಾರ್ಥಕವಾಗುತ್ತದೆ ಎಂದರು.
ಮೈಸೂರಿನ ಶ್ರೀ ರಾಮಕೃಷ್ಣಾಶ್ರಮದ ವಾಕ್ಯಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಬಿ.ಎಸ್. ನಾಗೇಶ್, ಕಾಲೇಜು ಕಾರ್ಯದರ್ಶಿ ಎಂ.ಜೆ. ಕಾರ್ತಿಕ್, ಪ್ರಾಂಶುಪಾಲ ಕೆ.ಕೆ. ನಾಗರಾಜ್ ವೇದಿಕೆಯಲ್ಲಿದ್ದರು. ವಸಂತಶಾಸ್ತ್ರಿ ಸ್ವಾಗತಿಸಿದರು, ದಿನೇಶ್ ಕಾರ್ಯಕ್ರಮ ನಿರೂಪಿಸಿದರು, ಸಹನಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement