ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದೇಶದ ಭದ್ರತೆ ನಮ್ಮೆಲ್ಲರ ಕರ್ತವ್ಯ

Lingaraj Badiger
Updated On : 16 Aug 2013, 11:05 am

ಚಿಕ್ಕಮಗಳೂರು: ಭಾರತದ ಏಕತೆ ಮತ್ತು ಭದ್ರತೆಯನ್ನು ಸಮಗ್ರವಾಗಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.
 ಜಿಲ್ಲಾ ಆಟದ ಮೈದಾನದಲ್ಲಿ ಗುರುವಾರ ನಡೆದ 67ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಒಂದು ಪೀಳಿಗೆ ಸ್ವಾತಂತ್ರ್ಯಕ್ಕಾಗಿ ತನ್ನ ಜೀವನ ತ್ಯಾಗ ಮಾಡಿ ಇತಿಹಾಸ ಸೃಷ್ಟಿಸಿತ್ತು, ಈಗ ನಾವೆಲ್ಲರೂ ಭಾರತವನ್ನು ವಿಶ್ವದ ಅತ್ಯುನ್ನತ ಸ್ಥಾನಕ್ಕೆ ಏರಿಸಲು ನಮ್ಮ ಜೀವನವನ್ನು ತೊಡಗಿಸಿಕೊಂಡು ಪುನಃ ಇತಿಹಾಸ ಸೃಷ್ಟಿಸೋಣ ಎಂದು ಕರೆ ನೀಡಿದರು.
ನಿರಂತರ ಸ್ಪೂರ್ತಿ: ಬ್ರಿಟೀಷರ ಆಡಳಿತವನ್ನು ಅಹಿಂಸಾ ಮಾರ್ಗದಿಂದಲೇ ಕಿತ್ತೊಗೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಜವಾಹರ್‌ಲಾಲ್ ನೆಹರು, ಸುಭಾಶ್‌ಚಂದ್ರಭೋಸ್, ಭಗತ್‌ಸಿಂಗ್ ಸೇರಿದಂತೆ ಅಸಂಖ್ಯಾತ ಮಹನೀಯರು ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನ ಮತ್ತು ಅವರ ಆದರ್ಶಗಳು ನಮಗೆಲ್ಲರಿಗೂ ನಿರಂತರ ಸ್ಪೂರ್ತಿಯಾಗಿವೆ.  ಸ್ವಾತಂತ್ರ್ಯದ ಹೊನಲಿನ ಈ ಸಂಭ್ರಮದಲ್ಲಿ ನಾವೆಲ್ಲರೂ ಇಂದು ಆತ್ಮಾವಲೋಕನ ಮಾಡಬೇಕಾಗಿದೆ. ದೇಶದ ಪ್ರತಿ ನಾಗರಿಕನಿಗೂ ಸ್ವಾತಂತ್ರ್ಯ ಎಷ್ಟರಮಟ್ಟಿಗೆ ನೆರವಾಗಿದೆ ಎಂಬುದರ ಬಗ್ಗೆ ಅಂತಃಕರಣದಿಂದ ಚಿಂತಿಸಬೇಕಾದ ಅಗತ್ಯವಿದೆ ಎಂದರು.
ದೇಶದ ಏಳಿಗೆ: ಅಭಿವೃದ್ಧಿ, ತಂತ್ರಜ್ಞಾನ ಮತ್ತಿತರ ರಂಗದಲ್ಲಿ ವಿಶ್ವದ ಇತರೆ ಕೆಲವು ರಾಷ್ಟಗಳು ನಮಗಿಂತ ಮುಂದೆ ಸಾಗುತ್ತಿರಬಹುದು. ಆದರೆ, ಇಲ್ಲಿನ ಸಂಸ್ಕೃತಿ, ವೈಭವ, ಹಿರಿಮೆ, ಇತಿಹಾಸಗಳಿಗೆ ಅವು ಖಂಡಿತಾ ನಿಲುಕದು. ದೇಶದ ಏಳಿಗೆ ಮತ್ತು ಕಲ್ಯಾಣಕ್ಕೆ ದೊರಕುವ ಪ್ರತಿಯೊಂದು ಅವಕಾಶಗಳನ್ನು ಉಪಯೋಗಿಸಿ, ಮನಃಪೂರ್ವಕವಾಗಿ ಪ್ರತಿಯೊಬ್ಬರೂ ಅರ್ಪಿಸಬೇಕಾಗಿದೆ.
ಬರ ಪರಿಸ್ಥಿತಿ: ವಿಪತ್ತುಗಳು, ಸವಾಲುಗಳು ಎದುರಾಗುವ ಸಂದರ್ಭದಲ್ಲಿ ಭಾರತೀಯರಾದ ನಾವೆಲ್ಲರೂ ಎಲ್ಲ ಭಿನ್ನತೆಗಳನ್ನು ಮರೆತು ಭಾರತೀಯತೆ ಏಕತೆಯಲ್ಲಿ ಜತೆಯಾಗುತ್ತಿದ್ದೇವೆ. ಇತ್ತೀಚೆಗೆ ಉತ್ತರಾಖಂಡ ರಾಜ್ಯದಲ್ಲಿ ಸಂಭವಿಸಿದ ಭೀಕರ ಪ್ರವಾಹ ಸಂದರ್ಭದಲ್ಲಿ ನಾವೆಲ್ಲರೂ ನೆರವಿನ ಹಸ್ತ ಚಾಚಿದ್ದೇವೆ.
 ಕಳೆದ ಕೆಲವು ವರ್ಷಗಳಿಂದ ಸರಿಯಾಗಿ ಮಳೆ ಇಲ್ಲದೆ ಬರ ಪರಿಸ್ಥಿತಿ ತಲೆದೋರಿ ಜನತೆ ಸಂಕಟ ಪಟ್ಟಿದ್ದರು. ಆದರೆ, ಈ ವರ್ಷ ಸಕಾಲಕ್ಕೆ ಮಳೆ ಆಗಮಿಸಿ ರಾಜ್ಯದ ಎಲ್ಲ ಕೆರೆ ಕಟ್ಟೆ, ಅಣೆಕಟ್ಟುಗಳು ತುಂಬಿ ತುಳುಕುತ್ತಿರುವುದು ಜನತೆಯಲ್ಲಿ ಸಂತಸವನ್ನು ತಂದಿದೆ. ಇದು ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಶುಭ ದಿನಗಳನ್ನು ತರುವ ಸಂಕೇತವಾಗಿದೆ ಎಂದರು.
 ರಾಜಕೀಯ ಅಧಿಕಾರವನ್ನು ಬಳಸಿಕೊಂಡು ಸಮಾಜದಲ್ಲಿರುವ ಬಡವರಿಗೆ ಪೋಷಣೆ, ನಿರ್ಗತಿಕರಿಗೆ ಆಸರೆ, ಅಶಕ್ತರಿಗೆ ರಕ್ಷಣೆ ಮತ್ತು ಸಾಮಾಜಿಕವಾಗಿ ತಾರತಮ್ಯಕ್ಕೊಳಗಾದವರಿಗೆ ನ್ಯಾಯ ಒದಗಿಸುವುದು ಸರಕಾರ ಬದ್ಧತೆಯಾಗಿದೆ. ಈ ನಿಟ್ಟಿನಲ್ಲಿ ಬಡ ಜನರಿಗೆ ಅಗ್ಗದ ದರದಲ್ಲಿ ಆಹಾರ ಒದಗಿಸುವ ಉದ್ದೇಶದೊಂದಿಗೆ ಒಂದು ರೂಪಾಯಿಗೆ ಒಂದು ಕೆ.ಜಿ.ಯಂತೆ ಪ್ರತೀ ಕುಟುಂಬಕ್ಕೆ 30 ಕೆ.ಜಿ. ಅಕ್ಕಿ ವಿತರಿಸುವ ಅನ್ನಭಾಗ್ಯ ಕಾರ್ಯಕ್ರಮವನ್ನು ಆರಂಭಿಸಿ ಬಡವರ ಆಹಾರ ಭದ್ರತೆಗೆ ದಿಟ್ಟ ಹೆಜ್ಜೆ ಇಟ್ಟಿದೆ. ಸಮಾಜದ ದುರ್ಬಲ ವರ್ಗಗಳ ಏಳಿಗೆಗೆ ಕಟಿಬದ್ಧರಾಗಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಗಳಿಂದ ವ್ಯಕ್ತಿಗತ ಫಲಾನುಭವಿಗಳು ತೆಗೆದುಕೊಂಡಿರುವ ಸಾಲವನ್ನು ಈಗಾಗಲೇ ಮನ್ನಾ ಮಾಡಲಾಗಿದೆ.
ಗ್ರಾಮೀಣ ಜನರ ಬಹುಮುಖ್ಯ ಚಟುವಟಿಕೆ ಹಾಲು ಉತ್ಪಾದನೆ ಇನ್ನಷ್ಟು ಪ್ರೋತ್ಸಾಹಿಸಲು ಹಾಲು ಉತ್ಪಾದಕರಿಗೆ ಪ್ರತೀ ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 4 ರುಪಾಯಿಗಳಿಗೆ ಹೆಚ್ಚಿಸಲಾಗಿದೆ. ದುರ್ಬಲ ವರ್ಗದ ಜನತೆಗೆ ವಸತಿ ಒದಗಿಸುವ ಯೋಜನೆಯಲ್ಲಿ ಪ್ರತಿಯೊಂದು ಮನೆಗೆ ನೀಡಲಾಗುವ ಸಹಾಯಧನದ ಮೊತ್ತವನ್ನು 75 ಸಾವಿರದಿಂದ 1.20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಸಚಿವರು ಹೇಳಿದರು.
 ಕಡೂರು ಮತ್ತು ಬೀರೂರು ಪಟ್ಟಣಗಳಿಗೆ ಭದ್ರಾ ನದಿಯಿಂದ ನೀರು ಒದಗಿಸುವ ಯೋಜನೆಯ ಬಹುತೇಕ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು,  ವರ್ಷಾಂತ್ಯಕ್ಕೆ ನೀರು ಒದಗಿಸಲು ಪ್ರಯತ್ನಿಸಲಾಗುವುದು.  ಚಿಕ್ಕಮಗಳೂರು- ಕಡೂರು ರೈಲ್ವೇ ಮಾರ್ಗದ ಕಾಮಗಾರಿ ಅಂತಿಮ ಅಂತ್ಯಕ್ಕೆ ಬಂದಿದ್ದು, ಅತಿ ಶೀಘ್ರದಲ್ಲಿಯೇ ಈ ಭಾಗದಲ್ಲಿ ರೈಲುಗಳ ಸಂಚಾರ ಆರಂಭವಾಗಲಿದೆ ಎಂದರು.
 ಮಲೆನಾಡಿನ ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರಕಾರ ಅರಿತುಕೊಂಡಿದೆ. ಈ ಹಿನ್ನೆಲೆಯಲ್ಲಿ ಅಡಕೆ ತೋಟಗಳಲ್ಲಿ ಲಾಭದಾಯಕವಾದ ಪರ್ಯಾಯ ಬೆಳೆಗಳನ್ನು ಬೆಳೆಸಲು ಪ್ರೋತ್ಸಾಹಿಸಲು ಸರಕಾರ ನಿರ್ಧರಿಸಿದೆ. ಈ ಪರ್ಯಾಯ ಬೆಳೆಗಳ ಬೇಸಾಯದ ಬಗ್ಗೆ ರೈತರಿಗೆ ಮನದಟ್ಟು ಮಾಡಲು ರೈತರ ತೋಟಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ ರಾಜ್ಯ ಸರಕಾರದ ಪ್ರಸಕ್ತ ಸಾಲಿನ ಬಜೆಟ್ಯ್ನಲ್ಲಿ 2 ಕೋಟಿ ರೂ. ಗಳನ್ನು ಒದಗಿಸಲಾಗಿದೆ ಎಂದರು.
 ಶಾಸಕ ಸಿ.ಟಿ. ರವಿ, ವಿಪ ಸದಸ್ಯೆ ಗಾಯಿತ್ರಿ  ಶಾಂತೇಗೌಡ, ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿಲ್ಲಾಧಿಕಾರಿ ಶೇಖರಪ್ಪ, ಜಿಲ್ಲಾ ರಕ್ಷಣಾಧಿಕಾರಿ  ಆರ್.ಎಚ್. ನಾಯಕ್, ಜಿಪಂ ಸಿಇಒ ಶಿವಶಂಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement