ಮಕ್ಕಳಲ್ಲಿ ದೇಶಭಕ್ತಿ ಅರಿವು ಮೂಡಿಸಿ
ಕ.ಪ್ರ.ವಾರ್ತೆ, ಮೂಡಿಗೆರೆ, ಆ.15
ಸ್ವಾತಂತ್ರ್ಯೋತ್ಸವದಲ್ಲಿ ಪ್ರತೀವರ್ಷ ಶಾಲೆಯ ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯೆನಿಸಿದೆ. ಮಕ್ಕಳಲ್ಲಿ ರಾಷ್ಟ್ರಪ್ರೇಮ ಬೆಳೆಯಬೇಕಾದರೆ ಸ್ವಾತಂತ್ರ್ಯ ಹೋರಾಟಗಾರರ ಸತ್ಯಾಗ್ರಹ, ದೇಶಕ್ಕಾಗಿ ಬಲಿದಾನಗೈದ ಮಹನಿಯರ ಬಗ್ಗೆ ಮನೆ ಮತ್ತು ಶಾಲೆಗಳಲ್ಲಿ ಅರಿವು ಮೂಡಿಸಬೇಕಿದೆ ಎಂದು ಶಾಸಕ ಬಿ.ಬಿ. ನಿಂಗಯ್ಯ ತಿಳಿಸಿದರು.
ಅವರು ಮೂಡಿಗೆರೆ ಹೊಯ್ಸಳ ಕ್ರೀಡಾಂಗಣದಲ್ಲಿ 67ನೇ ಸ್ವಾತಂತ್ರೋತ್ಸವದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನೆನೆಯಬೇಕು: ಕಾಫಿ ನಾಡೆಂದೇ ಪ್ರಸಿದ್ಧವಾಗಿರುವ ಮಲೆನಾಡಿನ ತವರೂರೆಂದೇ ಖ್ಯಾತಿಯಾಗಿರುವ ಮೂಡಿಗೆರೆ ತಾಲೂಕಿನಲ್ಲಿ 30 ಮಂದಿ ಭಾರತದ ಸ್ವಾತಂತ್ರ್ಯಕ್ಕಾಗಿ ಗಾಂಧಿಜಿಯವರೊಂದಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿ ಜೈಲುವಾಸ ಅನುಭವಿಸಿ ಬಂದಿದ್ದು. ಅವರನ್ನು ಪ್ರತಿಯೊಬ್ಬರೂ ನೆನೆಯಬೇಕಾಗಿದೆ ಎಂದು ಹೇಳಿದರು.
ತಾಲೂಕು ತಹಸೀಲ್ದಾರ್ ಎ.ವಿ. ರುದ್ರಾಪ್ಪಾಜಿರಾವ್ ಶುಭ ಸಂದೇಶ ಓದಿ, ಕಳೆದೆರಡು ತಿಂಗಳಿನಿಂದ ನಿರಂತರವಾಗಿ ಸುರಿದ ವರ್ಷಧಾರೆ ಅನ್ನಾದಾತನನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು. ಉಳುವ ಯೋಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದಕ್ಕೆ ತಾಲೂಕು ಆಡಳಿತ ಸೂಕ್ತವಾಗಿ ಮನವರಿಕೆ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕಿನಲ್ಲಿ ಉನ್ನತ ಶ್ರೇಣಿಗಳಲ್ಲಿ ಉತ್ತೀರ್ಣತೆ ಸಾಧಿಸಿರುವ ವಿದ್ಯಾರ್ಥಿಗಳಿಗೆ ಹಾಗೂ ಶ್ರಮಿಸಿದ ಶಾಲೆಯ ಮುಖ್ಯೋಪಾಧ್ಯಾಯರಿಗೆ, ಹಾಗೂ ಕ್ರೀಡೆಯಲ್ಲಿ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ತಾಪಂ ಅಧ್ಯಕ್ಷ ಶೇಷಗಿರಿ, ಸದಸ್ಯ ರಂಜನ್ ಅಜಿತ್ ಕುಮಾರ್, ತಾಪಂ ಸದಸ್ಯ ಸಬ್ಲಿ ದೇವರಾಜ್, ಹೂವಮ್ಮ, ಸುಬ್ರಾಯ, ತಾಲೂಕು ನೌಕರರ ಸಂಘದ ಅಧ್ಯಕ್ಷ ಎಂ. ಗಂಗಾಧರ್, ಕರವೇ ಪ್ರಸನ್ನ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಹೊರಟ್ಟಿ ರಘು, ಜಿಪಂ ಸದಸ್ಯ ಜ್ಯೋತಿ ಹೇಮಶೇಖರ್, ಅನಂತ್, ಶಿವಣ್ಣ, ಪಪಂ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ನೌಕರರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
ರಾಷ್ಟ್ರ ನಿರ್ಮಾಣಕ್ಕೆ ಮುಂದಾಗೋಣ
ಶೃಂಗೇರಿ: ಬ್ರಿಟೀಷರ ದಬ್ಬಾಳಿಕೆಯಿಂದ ಮುಕ್ತಿ ಪಡೆದ ಮಹತ್ವದ ದಿನ ಈ ಸ್ವಾತಂತ್ರ್ಯೋತ್ಸವ. ಪ್ರತಿಯೊಬ್ಬರಲ್ಲಿಯೂ ದೇಶಾಭಿಮಾನ, ದೇಶಭಕ್ತಿ ಜಾಗೃತಗೊಳಿಸಿ ಸದೃಢ, ಸಮೃದ್ಧ ರಾಷ್ಟ್ರಕಟ್ಟಲು ಮುಂದಾಗಬೇಕೆಂದು ತಹಸಿಲ್ದಾರ್ ಎಂ.ಎಂ. ದೇವಮ್ಮ ಕರೆ ನೀಡಿದರು.
ಅವರು ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಯೋಜಿಸಿದ್ದ 67 ನೇ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಸಂದೇಶವಾಚನ ಮಾಡಿದರು.
ದೇಶ ಸಾಮಾಜಿಕ, ಆರ್ಥಿಕವಾಗಿ ಇನ್ನಷ್ಟು ಬಲಿಷ್ಟವಾಗಬೇಕು. ಸಾವಿರಾರು ದೇಶಪ್ರೇಮಿಗಳ, ಮಹಾನ್ ನಾಯಕರುಗಳ ತ್ಯಾಗಬಲಿದಾನಗಳ ಸಂಕೇತವೇ ಈ ಸ್ವಾತಂತ್ರ್ಯದಿನ. ಪ್ರಾದೇಶಿಕ ಅಸಮಾನತೆ, ಜಾತಿ ಮರೆತು ನಾವೆಲ್ಲರೂ ಒಂದೇ, ಭಾರತೀಯರು ಎಂಬ ಭಾವನೆ ಮೂಡಿಸಿ ದೇಶದ ಅಭಿವೃದ್ಧಿಗೆ ಶ್ರಮಿಸೋಣ.
ಸಮಾಜದಲ್ಲಿ ಶಾಂತಿ ಸೌಹಾರ್ಧತೆ ಕಾಪಾಡೋಣ. ದೇಶದ ಭದ್ರತೆಗೆ ಸವಾಲಾಗಿರುವ ಬಾಹ್ಯ, ಆಂತರಿಕ ಶತ್ರುಗಳನ್ನು ಸದೆಬಡಿದು ರಾಷ್ಟ್ರವನ್ನು ರಕ್ಷಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ. ಶಿವಶಂಕರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶರಶ್ಚಂದ್ರ, ಸುಮಾ ಸೋಮಶೇಖರ್, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್, ದ. ರಾಜಣ್ಣ ಮತ್ತಿತರರು ಇದ್ದರು.