ರೈತರ ಸಹಾಯಕ್ಕೆ ಸರ್ಕಾರ ದಾವಿಸಲಿ
ನರಸಿಂಹರಾಜಪುರ: ಮಹಾತ್ಮಾ ಗಾಂಧೀಜಿಯವರು ಕಂಡ ಕನಸು ನನಸಾಗಬೇಕಾದರೆ ದೇಶದ ಬೆನ್ನೆಲಬಾದ ರೈತರು ಸಂತೃಪ್ತಿಯಾಗಿ ಬದಕಬೇಕಾಗಿತ್ತು. ಆದರೆ, ರೈತರು ಇಂದು ಸಂಕಷ್ಟದಲ್ಲಿದ್ದಾರೆ ಎಂದು ಶಾಸಕ ಡಿ.ಎನ್. ಜೀವರಾಜ್ ತಿಳಿಸಿದರು.
ಕುವೆಂಪು ಕ್ರೀಡಾಂಗಣದಲ್ಲಿ ನಡೆದ 67 ನೇ ಸ್ವಾತಂತ್ರ್ಯ ದಿನಾಚರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷ ಅತಿ ಮಳೆಯಿಂದಾಗಿ ರೈತರು ಬೆಳೆದ ಫಸಲು ನಷ್ಟವಾಗಿ ರೈತರು ಕಂಗಾಲಾಗಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಭಯೋತ್ಪಾದಕರ ಭಯದ ನೆರಳಿನಲ್ಲಿ ಪೊಲೀಸರ ರಕ್ಷಣೆಯಲ್ಲಿ ದೇಶ ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕಾಗಿರುವುದು ದುರಂತವಾಗಿದೆ.ಪೊಲೀಸರ ರಕ್ಷಣೆ ಇಲ್ಲದೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಸ್ಥಿತಿ ನಿರ್ಮಾಣವಾದಾಗ ಮಾತ್ರ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದಂತಾಗುತ್ತದೆ ಎಂದು ತಿಳಿಸಿದರು.
ಪ್ರಭಾರಿ ತಹಸೀಲ್ದಾರ್ ಲೋಕೇಶಪ್ಪ ರಾಷ್ಟ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪರಕೀಯರ ದಾಳಿಯಿಂದ ನಮ್ಮನ್ನು ವಿಮುಕ್ತಿಗೊಳಿಸಲು ಹೋರಾಟ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಜ್ಞಾಪಿಸಿಕೊಳ್ಳಬೇಕಾಗಿದೆ ಎಂದರು.
ಜಿಪಂ ಉಪಾಧ್ಯಕ್ಷೆ ಸುಜಾತ ಮಾತನಾಡಿ, ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರವನ್ನು ದುರುಪಯೋಗ ಪಡಿಸಿಕೊಳ್ಳದೆ ಸದುಪಯೋಗ ಮಾಡಿಕೊಳ್ಳಬೇಕು. ದೇಶವನ್ನು ಅಭಿವೃದ್ಧಿ ಶೀಲ ರಾಷ್ಟ ಮಾಡಲು ಯುವ ಜನರು ಪಣ ತೊಡಬೇಕಾಗಿದೆ ಎಂದರು. ತಾಪಂ ಅಧ್ಯಕ್ಷ ಜೆ.ಜಿ. ನಾಗರಾಜ್, ನೀಲೇಶ್, ಎಚ್.ಜಿ. ಸುರೇಶ್, ಕೆ.ಪಿ. ಸಂಪತ್ ಕುಮಾರ್, ಕೆ.ಟಿ. ವೆಂಕಟೇಶ್, ಸೀಮಾ, ಸಮೀರಾ ನಹೀಂ, ಲಕ್ಷ್ಮಣಶೆಟ್ಟರು, ಸುನೀಲ್, ಆಶೀಶ್ ಇದ್ದರು