ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜಿಲ್ಲೆಯಾದ್ಯಂತ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Lingaraj Badiger
Updated On : 17 Aug 2013, 10:56 am

ಕ.ಪ್ರ.ವಾರ್ತೆ, ಕೊಪ್ಪ,  ಆ.16
ದೈನಂದಿನ ಜೀವನದಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಪರಿಪೂರ್ಣ ಸ್ವಾತಂತ್ರ್ಯದ ಅನುಭವ ಆಗಬೇಕೆಂದರೆ ಶಿಕ್ಷಣ, ಆರೋಗ್ಯ, ಸಾಮಾಜಿಕ ಸಮಾನತೆ ಒದಗಿಸಿದಾಗ ಮಾತ್ರ ಸಾಧ್ಯ ಎಂದು ತಹಸೀಲ್ದಾರ್ ಶ್ರೀಧರಮೂರ್ತಿ ಎಸ್. ಪಂಡಿತ್ ಹೇಳಿದರು.
67ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಲಾಲ್ ಬಹುದ್ದೂರ್ ಶಾಸ್ತ್ರೀ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದ ಉದ್ದೇಶವೇ ಪ್ರತಿಯೊಬ್ಬ ನಾಗರಿಕನಿಗೂ ನೆಮ್ಮದಿಯಿಂದ ಜವಾಬ್ದಾರಿತವಾಗಿ ಬದುಕಲು ಅವಕಾಶ ಕಲ್ಪಿಸುವುದಾಗಿದೆ ಎಂದರು.
ಭಾರಿ ನಷ್ಟ: ಈ ಭಾಗದ ಅನ್ನದಾತ ಅತೀವೃಷ್ಟಿಯಿಂದ ಭಾರೀ ನಷ್ಟ ಅನುಭವಿಸುತ್ತಿದ್ದು, ಆತನಲ್ಲಿ ಆತ್ಮವಿಶ್ವಾಸ ಕುಗ್ಗಿಹೋಗಿದೆ. ಕೈಗೆ ಬಂದ ಬೆಳೆ ನಾಶವಾಗಿದೆ. ರೈತ ನಿರಾಸೆಯ ಕೂಪಕ್ಕೆ ಬಿದಿದ್ದಾನೆ. ಆತನಿಗೆ ಧೈರ್ಯ ತುಂಬಿ ಕೃಷಿ ಚಟುವಟಿಕೆ ಮುನ್ನಡೆಸಿಕೊಂಡು ಪ್ರೇರೆಪಿಸುವ ಹೊಣೆ ನಮ್ಮದಾಗಿದೆ ಎಂದರು.
ಹುತಾತ್ಮರಾದ ಯೋಧರಿಗೆ ಗೌರವ ಅರ್ಪಣೆ ಸಲ್ಲಿಸಲಾಯಿತು. ಪೊಲೀಸ್ ಗೃಹರಕ್ಷಕದಳ, ವಿದ್ಯಾರ್ಥಿಗಳ ಧ್ವಜವಂದನೆ ಹಾಗೂ ಪಥ ಸಂಚಲನ ನೆರವೇರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳು, ಕ್ರೀಡಾಪಟುಗಳನ್ನು ಪುರಸ್ಕರಿಸಲಾಯಿತು, ಪ್ಯಾರಾ ಒಲಂಪಿಕನಲ್ಲಿ ಪದಕ ವಿಜೇತ ಎಚ್. ಹೊಸೂರಿನ ವಿಶೇಷ ಕ್ರೀಡಾಪಟು ಬಿ.ಜಿ. ಸಂದೇಶ ಅವರನ್ನು ಸನ್ಮಾನಿಸಲಾಯಿತು.
ತಾಪಂ ಅಧ್ಯಕ್ಷೆ ಪದ್ಮಾವತಿ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಸುಚಿತಾ ನರೇಂದ್ರ, ಅನ್ನಪೂರ್ಣ ಚನ್ನಕೇಶವ, ತಾಪಂ ಉಪಾಧ್ಯಕ್ಷ ರಮೇಶ್ ಬೆಳಗೊಳ, ಸದಸ್ಯ ಪೂಣಚಂದ್ರ, ಪ್ರೇಮಾ ದಾಮೋದರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಎಸ್. ನಟರಾಜ್, ಪಪಂ ಸದಸ್ಯ ಶ್ರೀನಿವಾಸ್ ಶೆಟ್ಟಿ, ದಿವಾಕರ್ , ಸುಬ್ರಮಣ್ಯ, ವಾಣಿ ಸತೀಶ್, ವಿಜಯ್ ಕುಮಾರ್, ಹರೀಶ್ ಭಂಡಾರಿ, ವಸಂತಿ ಮೊದಲಾದವರು ಇದ್ದರು.
ವಿದ್ಯುತ್ ಗುತ್ತಿಗೆದಾರರ ಸಂಘ ಆಚರಣೆ
ಕಡೂರು: ತಾಲೂಕಿನ ವಿದ್ಯುತ್ ಗುತ್ತಿಗೆದಾರರ ಸಂಘ ಸ್ಥಾಪನೆಯಾದ ಬಳಿಕ ಪ್ರಥಮ ಬಾರಿಗೆ ಸಂಘದ ಕಚೇರಿ ಆವರಣದಲ್ಲಿ 67ನೇ ಸ್ವಾತಂತ್ರ್ಯ ದಿನಾಚರಣೆಯ ಜೊತೆ ದೇಶದ ಗಡಿ ಕಾಯುವ ಯೋಧರನ್ನು ಸ್ಮರಿಸಿ ಕಾರ್ಯಕ್ರಮ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಂ. ರಮೇಶ್ ಮಾತನಾಡಿ, ನಮ್ಮ ಹಿರಿಯರಾದ ಗಾಂಧೀಜಿ, ಸುಭಾಶ್ಚಮದ್ರ ಬೋಸ್, ಸರ್ದಾರ್ ಪಟೇಲ್ ಅವರಂತಹವರು ತಮ್ಮ ತ್ಯಾಗ ಬಲಿದಾನಗಳಿಂದ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವುದು ನಮ್ಮ ಪುಣ್ಯವಾಗಿದ್ದು, ಅವರ ದೇಶಭಕ್ತಿಗೆ ಸಾಕ್ಷಿಯಾಗಿದೆ ಎಂದರು.
ಕರಿಸಿದ್ದಯ್ಯ, ಪರುಶುರಾಮಪ್ಪ, ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಲೋಕೇಶ್, ತಾಲೂಕು ಉಪಾಧ್ಯಕ್ಷ ಮರುಳಸಿದ್ದಾರಾಧ್ಯ, ಕಾರ್ಯದರ್ಶಿ ಜಗದೀಶ್, ಸದಸ್ಯ ಖಲೀಲ್ ಅಹಮದ್, ರಾಜಣ್ಣ, ಏಜಾಜ್ ಅಹಮದ್,  ಅನಿಲ್ ಕುಮಾರ್, ಮಂಜುನಾಥ್, ನಾಗರಾಜ್, ಮಂಜುನಾಥ್, ಲೆಕ್ಕಾಧಿಕಾರಿ ಸಿದ್ದಪ್ಪ, ಪ್ರಕಾಶ್, ಮೆಸ್ಕಾಂ ನೌಕರ ಬಳಗದವರು, ಗುತ್ತಿಗೆದಾರರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಆಟೋ ಚಾಲಕ,  ಮಾಲೀಕರ ಸಂಭ್ರಮ
ಮೂಡಿಗೆರೆ: ತಾಲೂಕಿನ ಗೋಣಿಬೀಡು ಹೋಬಳಿಯಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಗೋಣಿಬೀಡು ಬಸ್ಸು ನಿಲ್ದಾಣದ ಬಳಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಧ್ವಜರೋಹಣವನ್ನು ಗೋಣಿಬೀಡು ಠಾಣಾಧಿಕಾರಿ ರೇವಣ್ಣ ನೆರವೇರಿಸಿ ಶುಭ ಸಂದೇಶ ತಿಳಿಸಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಮಿತಿ ಗೋಣಿಬೀಡು ಒಕ್ಕೂಟದ ಮಾಜಿ ಅಧ್ಯಕ್ಷ ಜಕಾವುಲ್ಲಾ ಮಾತನಾಡಿ, ಭಾರತ ದೇಶವು ತಂತ್ರಜ್ಞಾನದಲ್ಲಿ ಮುಂದುವರೆದ ದೇಶವಾಗಿದೆ. ಇಂದಿನ ಯುವ ಪೀಳಿಗೆಗೆ ಗುಣ ಮಟ್ಟದ ಶಿಕ್ಷಣ ನೀಡಿದಲ್ಲಿ ದೇಶ ಪ್ರಗತಿ ಹೊಂದಲು ಸಾಧ್ಯ ಎಂದರು.
ಆಟೋ ಚಾಲಕ, ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್, ಜೆಡಿಎಸ್ ಹೋಬಳಿ ಅಧ್ಯಕ್ಷ ಕೆ.ಬಿ. ರಾಮಚಂದ್ರೇಗೌಡ, ಗ್ರಾಮಸ್ಥರು, ಆಟೋ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸಹಕಾರ ಸಾರಿಗೆ ಸಂಸ್ಥೆ
ಕೊಪ್ಪ: ಇಲ್ಲಿನ ಸಹಕಾರ ಸಾರಿಗೆ ಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 67ನೇ ಸ್ವಾತಂತ್ರೋತ್ಸವ  ಹಾಗೂ ಪ್ರತಿಭಾ ಪುರಸ್ಕಾರವನ್ನು ಆಕಾಶವಾಣಿ ಕಲಾವಿದ ಗರ್ತಿಕೆರೆ ರಾಘಣ್ಣ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಪ್ರಯಾಣಿಕರ ಪ್ರೀತಿಯ ಸಾಗರದಲ್ಲಿ ಸಾರಿಗೆ ಬಸ್‌ಗಳು ಸಂಚಾರಿಸಿ ಸಹಕಾರ ಸಾರಿಗೆ ಸಂಸ್ಥೆ ಸಮಾಜಕ್ಕೆ ಮಾದರಿಯಾಗಿ ಪ್ರಗತಿಪಥದಲ್ಲಿ ಸಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸಂಸ್ಥೆ ಉಪಾಧ್ಯಕ್ಷ ಇ.ಎಸ್. ಧರ್ಮಪ್ಪ ಮಾತನಾಡಿ, ಕಾರ್ಮಿಕರೇ ಮಾಲೀಕರಾಗಿರುವ ಸಹಕಾರ ಸಾರಿಗೆ ಸಂಸ್ಥೆಯ ಸ್ಥಾಪನೆಗೆ ಮುಖ್ಯ ಪ್ರೇರಕ ಶಕ್ತಿಯಾದ ದಿವಂಗತ ಬಿ.ಕೆ. ಸುಂದರೇಶ್ ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಪ್ರತಿವರ್ಷ ಸ್ವಾತಂತ್ರ್ಯದಿನಾಚರಣೆಯ ದಿನದಂದು ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗನ್ನು ಪುರಸ್ಕರಿಸಲಾಗುತ್ತಿದೆ ಎಂದು ತಿಳಿಸಿದರು.
ಶೃಂಗೇರಿ ಕ್ಷೇತ್ರದ 3 ತಾಲೂಕುಗಳ ಪ್ರತಿಯೊಂದು ಪ್ರೌಢಶಾಲೆಯಲ್ಲಿ ಎಸ್ಸೆಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಒಟ್ಟು 60 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಧ್ಯಕ್ಷತೆಯನ್ನು ಸಹಕಾರ ಸಾರಿಗೆ ಸಂಸ್ಥೆ ಅಧ್ಯಕ್ಷ ಜಿ.ಎಸ್. ವಿಶ್ವನಾಥ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಮಹೇಶ್ ಭಟ್, ತಮ್ಮಣ್ಣಗೌಡ, ಗಾಡ್ವಿನ್ ಜಯಪ್ರಕಾಶ್ ಮೊದಲಾದವರು ಇದ್ದರು.
ಕಾಂಗ್ರೆಸ್ ಕಾರ್ಯಾಲಯ
ತರೀಕೆರೆ: ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸ್ವಾತಂತ್ರ್ಯೋತ್ಸವ  ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಶಾಸಕ ಜಿ.ಎಚ್. ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದಲ್ ಘನಿ ಅನ್ವರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಖಚಾಂಚಿ ಬಿ.ಎಸ್.ಆರ್. ಮಂಜುನಾಥ್, ಪುರಸಭಾ ಸದಸ್ಯರಾದ ನಾಗರಾಜ್, ಧರ್ಮರಾಜ್, ಪ್ರಕಾಶ್ ವರ್ಮ, ಮಂಜುನಾಥ್, ಮೋಹನ್ ಕುಮಾರ್,  ಮಾಜಿ ಪುರಸಭಾಧ್ಯಕ್ಷೆ ಹೇಮಲತಾ ರೇವಣ್ಣ, ಪರಶುರಾಂ, ಪಕ್ಷದ ಕಾರ್ಯಕರ್ತರು ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement