ರಸ್ತೆ ಅಪಘಾತ: ದಂಪತಿ ಸಾವು
ಚಿಕ್ಕಮಗಳೂರು: ನಗರದ ಹೊರವಲಯದಲ್ಲಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಂಪತಿ ಮೃತಪಟ್ಟಿದ್ದಾರೆ.
ಪ್ರವೀಣ್ (30), ಅವರ ಪತ್ನಿ ಉಮಾ (26) ಮೃತಪಟ್ಟ ದುರ್ದೈವಿಗಳು. ಅರಸಿಕೆರೆ ತಾಲೂಕಿನ ಮದ್ರಹಳ್ಳಿ ಗ್ರಾಮದವರಾದ ಪ್ರವೀಣ್ ಅವರು ಪತ್ನಿ ಉಮಾ ಅವರೊಂದಿಗೆ ಬೈಕಿನಲ್ಲಿ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದ ವೇಳೆಗೆ ನಗರ ಹೊರ ವಲಯದ ಕಣಿವೆ ಬಳಿ ಎದುರಿಗೆ ಬಂದ ಟೋಮ್ಯಾಟೋ ಸಾಗಾಣಿಕೆಯ 407 ವಾಹನ ಡಿಕ್ಕಿ ಹೊಡೆದಿದೆ.
ತೀವ್ರವಾಗಿ ಗಾಯಗೊಂಡಿದ್ದ ದಂಪತಿಯನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ವೇಳೆಗೆ ಪ್ರವೀಣ್ ಅವರು ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಉಮಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಉಮಾ ಅವರು ತಾಲೂಕಿನ ಮರ್ಲೆ ಗ್ರಾಮದವರಾಗಿದ್ದು, ಅವರು ಪತಿ ಪ್ರವೀಣ್ ಅವರೊಂದಿಗೆ ತವರು ಮನೆಗೆ ಬರುವ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಬೈಕಿಗೆ ಡಿಕ್ಕಿ ಹೊಡೆದ 407 ವಾಹನವು ಸಮೀಪದ ಕಂದಕಕ್ಕೆ ಉರುಳಿದೆ. ಚಾಲಕ ಪರಾರಿಯಾಗಿದ್ದು, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಗುಂಡು ತಗುಲಿ ಪತ್ನಿ ಸಾವು: ಪತಿಗೆ ಜೈಲು
ಚಿಕ್ಕಮಗಳೂರು: ಬಂದೂಕಿನಿಂದ ಆಕಸ್ಮಿಕ ಗುಂಡು ಹಾರಿ ಮರಣಕ್ಕೆ ಕಾರಣನಾದ ಆರೋಪಿಗೆ ಜೆ.ಎಂ.ಎಫ್.ಸಿ. ನ್ಯಾಯಾಲಯವು ಮೂರುವರೆ ವರ್ಷ ಜೈಲು ಶಿಕ್ಷೆ ಹಾಗೂ ಒಂದು ಸಾವಿರ ದಂಡ ವಿಧಿಸಿದೆ.
2005 ಮಾರ್ಚ್ 2 ರಂದು ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ತಾಲೂಕಿನ ಮಹಲ್ ಗ್ರಾಮದ ಕುರ್ಚಿನ ಬಾಗಿಲು ಎಸ್ಟೇಟ್ನ ಕಾಫಿ ತೋಟದ ಕೂಲಿ ಲೈನ್ ವಾಸವಿರುವ ಆರೋಪಿ ದುರ್ಗಾನಾಯ್ಕ ಎಸ್.ಬಿ.ಎಂ.ಎಲ್. ಬಂದೂಕನ್ನು ಲೋಡ್ ಮಾಡಿ ಪರಿಶೀಲಿಸುತ್ತಿದ್ದಾಗ ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿ ಎದುರಿಗೆ ಇದ್ದ ಆತನ ಪತ್ನಿ ಮಂಜುಳ ಇವರ ಕುತ್ತಿಗೆ ಮತ್ತು ತಲೆಗೆ ಗುಂಡು ತಗಲಿ ಸ್ಥಳದಲ್ಲೇ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ದಯಾನಂದ ವಿ. ಹಿರೇಮಠ ಅವರು ಆರೋಪ ಸಾಬೀತಾದ ಹಿನ್ನೆಲೆ ಆರೋಪಿ ದುರ್ಗಾನಾಯ್ಕನಿಗೆ ಮೂರುವರೆ ವರ್ಷ ಜೈಲು ಶಿಕ್ಷೆ ಹಾಗೂ ಒಂದು ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ನಾರಾಯಣ ಶೇರಿಗಾರ್ ಮೊಕದ್ದಮೆ ನಡೆಸಿದ್ದರು.