ವರ ಮಹಾಲಕ್ಷ್ಮಿ ವ್ರತ ಆಚರಣೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು , ಆ.16
ಮಹಿಳೆಯರು ವರ ಮಹಾಲಕ್ಷ್ಮಿ ವ್ರತವನ್ನು ಶ್ರದ್ಧಾ, ಭಕ್ತಿಯಿಂದ ಶುಕ್ರವಾರ ಆಚರಿಸಿದರು.
ವರಲಕ್ಷ್ಮಿ ವ್ರತದ ಅಂಗವಾಗಿ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ, ಮನೆಗಳಲ್ಲಿ ಕಲಶ ಪ್ರತಿಷ್ಠಾಪಿಸಿ ಭಕ್ತಿಯಿಂದ ಲಕ್ಷ್ಮಿಯನ್ನು ಪೂಜಿಸಿ ಪ್ರಾರ್ಥಿಸಿದರು.
ಹಬ್ಬಕ್ಕೆಂದು ತಯಾರಿಸಿದ ವಿವಿಧ ಖಾದ್ಯಗಳನ್ನು ದೇವರಿಗೆ ನೈವೇದ್ಯ ಮಾಡಿದರು. ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿದ ಮಹಿಳೆಯರು ಅರಿಶಿನ, ಕುಂಕುಮ, ಹೂ, ಬಳೆಗಳನ್ನು ನೀಡಿ ಸತ್ಕರಿಸಿದರು. ಹೂ, ಹಣ್ಣು ಮತ್ತಿತರ ಪೂಜಾ ಸಾಮಾಗ್ರಿಗಳ ಬೆಲೆ ಏರಿಕೆ ನಡುವೆಯೂ ಲಕ್ಷ್ಮೀ ವ್ರತ ವಿಜೃಂಭಣೆಯಿಂದ ನಡೆಯಿತು.
ವಿವಿಧ ದೇವಿ ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ಮಹಿಳೆಯರು ತೆರಳಿ ವಿಶೇಷ ಪೂಜೆ ಸಲ್ಲಿಸಿದರು.