ಸಂಗೊಳ್ಳಿ ರಾಯಣ್ಣ ವೇದಿಕೆ ಉದ್ಘಾಟನೆ
ತರೀಕೆರೆ: ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರರು ಇದ್ದರೂ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಬೆರಳೆಣಿಕ ನೌಕರರು ಭಾಗವಹಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ ಆರೋಪಿಸಿದ್ದಾರೆ.
ಅವರು, ಕರ್ನಾಟಕ ರಕ್ಷಣಾ ಕನ್ನಡ ಸೇನೆಯಿಂದ ಪಟ್ಟಣದ ಮಹಾತ್ಮಾಗಾಂಧಿ ವೃತ್ತದ ಬಳಿ ಏರ್ಪಡಿಸಲಾಗಿದ್ದ ಸಂಗೊಳ್ಳಿ ರಾಯಣ್ಣ ವೇದಿಕೆ ಉದ್ಘಾಟಿಸಿ ಮಾತನಾಡಿದರು. ಪ್ರಥಮ ದರ್ಜೆ ಕಾಲೇಜು ಸ್ಥಳಾಂತರದ ಬಗ್ಗೆ ಪ್ರಸ್ತಾಪಿಸಿದ ಅವರು ಕಾಲೇಜು ಕಟ್ಟಡಕ್ಕೆ ಈಗಾಗಲೇ ಸ್ಥಳ ನೀಡಿದ್ದರೂ, ಕಾಮಗಾರಿ ಪ್ರಾರಂಭವಾಗಿಲ್ಲ. ಕಾಲೇಜು ಸ್ಥಳಾಂತರಿಸಿರುವುದರಿಂದ ವಿದ್ಯಾರ್ಥಿಗಳು ಸುಮಾರು 2 ಕಿಮೀ ನಡೆಯಬೇಕಾಗುತ್ತದೆ. ನೂತನ ಕಟ್ಟಡ ನಿರ್ಮಾಣವಾಗುವರೆಗೂ ಇರುವ ಕಟ್ಟಡವನ್ನೇ ದುರಸ್ತಿಗೊಳಿಸುವುದು ಒಳ್ಳೆಯದು ಎಂದು ಅವರು ತಿಳಿಸಿದರು. ಕೆಪಿಸಿಸಿ ಸದಸ್ಯ ಟಿ.ವಿ. ಶಿವಶಂಕರಪ್ಪ ಮಾತನಾಡಿ, ಯುವಕರು ಮುಂದಾಳತ್ವ ವಹಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು. ಕರವೇ ಅಧ್ಯಕ್ಷ ಕಿರಣ್‌ಗೌಡ, ಪುರಸಭಾ ಸದಸ್ಯ ಆನಂದ್, ಧನುಷ್, ಮೂರ್ತಿ, ಯಶವಂತ್ ಇತರರು ಭಾಗವಹಿಸಿದ್ದರು.