ಅತಿವೃಷ್ಟಿ ಪರಿಹಾರ ಒದಗಿಸಲು ಕೃಷಿಕ ಸಮಾಜ ಆಗ್ರಹ
ಕಪ್ರ ವಾರ್ತೆ ಚಿಕ್ಕಮಗಳೂರು ಆ.17
ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ನಷ್ಟ ಅನುಭವಿಸಿರುವ ರೈತರು ಮತ್ತು ಬೆಳೆಗಾರರಿಗೆ ಪರಿಹಾರ ಒದಗಿಸುವಂತೆ ಜಿಲ್ಲಾ ಕೃಷಿಕ ಸಮಾಜ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಶೇಖರಪ್ಪ ಅವರನ್ನು ಶನಿವಾರ ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದ ಸಂಸ್ಥೆಯ ಪದಾಧಿಕಾರಿಗಳು ಕಳೆದ 2 ತಿಂಗಳಿನಿಂದ ಕೃಷಿ ಚಟುವಟಿಕೆಗಳಿಗೆ ಬಿಡುವು ನೀಡದೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲಾದ್ಯಂತ ಬೆಳೆನಷ್ಟ ಉಂಟಾಗಿದ್ದು ರೈತರು ಮತ್ತು ಬೆಳೆಗಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಬೆಳೆ ನಾಶ: ಅತಿಯಾದ ಮಳೆಯಿಂದಾಗಿ ಕಾಫೀ ತೋಟಗಳಿಗೆ ಕೊಳೆರೋಗ ತಗುಲಿರುವ ಪರಿಣಾಮ ಕಾಫೀ ಗಿಡಗಳಲ್ಲಿನ ಫಸಲು ನೆಲಕ್ಕುದುರಿ ಮಣ್ಣು ಪಾಲಾಗುತ್ತಿದೆ. ಇದರ ಜೊತೆಗೆ ಕಾಫೀ ಬೆಳೆಗಾರರ ಉಪ ಬೆಳೆಯಾದ ಕಾಳು ಮೆಣಸಿನ ಬಳ್ಳಿಗಳು ಕೊಳೆತು ನಾಶವಾಗಿವೆ. ಕೊಳೆರೋಗದಿಂದಾಗಿ ಫಸಲನ್ನು ಕಳೆದುಕೊಂಡು ಅಡಕೆ ಬೆಳೆಗಾರರೂ ಕಂಗಾಲಾಗಿದ್ದಾರೆ ಎಂದು ತಿಳಿಸಿದರು.
ಬತ್ತಕ್ಕೂ ಹಾನಿ: ಮಲೆನಾಡಿನಲ್ಲಿ ಬತ್ತದ ಬೆಳೆಗೆ ಹಾನಿಯಾಗಿದ್ದರೆ ಬಯಲು ಭಾಗದಲ್ಲಿ ಆಲೂಗೆಡ್ಡೆ, ಈರುಳ್ಳಿ, ಮೆಣಸಿನ ಕಾಯಿ ಸೇರಿದಂತೆ ತರಕಾರಿ ಹಾಗೂ ಇತರ ಬೆಳೆಗಳು ಅತಿವೃಷ್ಟಿಯಿಂದಾಗಿ ಮಣ್ಣು ಪಾಲಾಗಿದ್ದು ಜಿಲ್ಲೆಯಲ್ಲಿ 441 ಕೋಟಿ ರು.ನಷ್ಟು ಬೆಳೆ ನಷ್ಟ ಸಂಭವಿಸಿದೆ ಎಂದು ಹೇಳಿದರು.
ಸಾಲ ಮಾಡಿ ಕೃಷಿಗೆ ಹಣ ಸುರಿದಿರುವ ರೈತರು ಮತ್ತು ಬೆಳೆಗಾರರು ಬೆಳೆನಷ್ಟದಿಂದಾಗಿ ಕಂಗಾಲಾಗಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಅವರ ನೆರವಿಗೆ ತಕ್ಷಣ ಲ್ಲಾಡಳಿತ ಧಾವಿಸಬೇಕು.
ಬೆಳೆ ನಷ್ಟದ ಪರಿಶೀಲನೆ ನಡೆಸಿ ಸರ್ಕಾರದಿಂದ ಸೂಕ್ತ ಪರಿಹಾರವನ್ನು ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಸಿ. ನರೇಂದ್ರ, ಉಪಾಧ್ಯಕ್ಷ ಬಿ.ಜಿ. ಮಂಜುನಾಥ್, ನಿರ್ದೇಶಕ ಎ.ಕೆ. ವಸಂತೇಗೌಡ ಹಾಜರಿದ್ದರು.