ಆರೋಗ್ಯವಂತ ಸಮಾಜ ನಿರ್ಮಿಸಿ: ದೇವರಾಜು
ಕ.ಪ್ರ.ವಾರ್ತೆ ಬೀರೂರು ಆ.17
ನೈರ್ಮಲ್ಯ ಸಂರಕ್ಷಣೆ ಮತ್ತು ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಪಟ್ಟಣದ ಬಡಾವಣೆಗಳ ನಾಗರಿಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಬಿಜೆಪಿ ಮುಖಂಡ ಬೀರೂರು ದೇವರಾಜು ಹೇಳಿದರು.
ಪಟ್ಟಣದ ರಾಜಾಜಿನಗರ ಬಡಾವಣೆಯಲ್ಲಿ ದುರ್ಗಾಪರಮೇಶ್ವರಿ ಟ್ರಸ್ಟ್ನಿಂದ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ ಸುಸುಜ್ಜಿತ ಗಿಡ ಸಂರಕ್ಷಣೆಯ ಜೋಡಣೆಯೊಂದಿಗೆ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
150 ಸಸಿ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಯುವಕರು, ವಿದ್ಯಾರ್ಥಿಗಳು, ನಿವೃತ್ತ ನೌಕರರು ಹೆಚ್ಚಿನ ಕಾಳಜಿ ವಹಿಸಿ, ಸಾಧ್ಯವಿರುವ ಎಲ್ಲೆಡೆ ಗಿಡನೆಡಲು ಮುಂದೆ ಬರಬೇಕು. ಪುರಸಭೆ, ಅರಣ್ಯ ಇಲಾಖೆ ಹಾಗೂ ಸಂಘ ಸಂಸ್ಥೆಗಳು ದಾನಿಗಳ ಸಹಕಾರದಿಂದ ಹೆಚ್ಚಿನ ಗಿಡ ನೆಡುವ ಕೆಲಸ ಆಗಬೇಕು. ಟ್ರಸ್ಟ್ ಕೂಡಾ ಈ ಉತ್ತಮ ಕಾರ್ಯಕ್ಕೆ ಎಲ್ಲ ರೀತಿಯಲ್ಲೂ ಸಾಧ್ಯವಾದ ನೆರವು ನೀಡುತ್ತಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ 150ಕ್ಕೂ ಹೆಚ್ಚಿನ ಸಸಿಗಳನ್ನು ನೆಡಲಾಯಿತು.
ನಿವಾಸಿಗಳ ಪರವಾಗಿ ಹೋಬಳಿ ಕಸಾಪ ಅಧ್ಯಕ್ಷ ಬಿ. ಕುಮಾರಸ್ವಾಮಿ ಮಾತನಾಡಿ, ಪುರಸಭೆ ಸಾರ್ವತ್ರಿಕ ಗಿಡ ನೆಡುವ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಬೇಕು. ಬಡಾವಣೆಗಳಲ್ಲಿ ಬೆಳೆದಿರುವ ಜಾಲಿ ಗಿಡ ಹಾಗೂ ಕುರುಚಲು ಗಿಡ ತೆಗೆಸಿ, ಕಸದ ಕಂಟೇನರ್ಗಳನ್ನು ಅಳವಡಿಸಿ ಸ್ವಚ್ಛತೆ ಕಾಪಾಡುವುದರ ಜೊತೆ ಕೊಳಚೆ ನಿಲ್ಲದಂತೆ ಚರಂಡಿ ದುರಸ್ತಿಗೊಳಿಸಿ, ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಪುರಸಭಾ ಸದಸ್ಯ ದೇವರಾಜ್ ಹಾಗೂ ಬಡಾವಣೆಯ ಯುವಪಡೆ ಈ ಸಸಿ ನೆಡುವ ಕಾರ್ಯಕ್ಕೆ ಕೈ ಜೋಡಿಸಿತ್ತು.