ಕಡೂರು- ಚಿಕ್ಕಮಗಳೂರು ರೇಲ್ವೆ ಮಾರ್ಗದಲ್ಲಿ ಹಳಿ ತಪ್ಪಿದ ಎಂಜಿನ್
ಕ.ಪ್ರ.ವಾರ್ತೆ ಚಿಕ್ಕಮಗಳೂರು ಆ.17
ನಗರಕ್ಕೆ ರೈಲು ಬರಬೇಕೆಂಬ ಹಲವು ದಶಕಗಳ ಕನಸು ನನಸಾಗುವ ಕಾಲ ಸಮೀಪಿಸುತ್ತಿದ್ದು, ಆ ಶುಭ ದಿನ ಎದುರು ನೋಡುತ್ತಿರುವ ಜನತೆಯ ಎದುರು ಅಘಾತಕಾರಿ ಘಟನೆಯೊಂದು ಶನಿವಾರ ನಡೆಯಿತು.
ರೇಲ್ವೆ ಕಾಮಗಾರಿಗಾಗಿ ಜಲ್ಲಿ ತರುತ್ತಿದ್ದ ಎಂಜಿನ್ ಸೇರಿದಂತೆ ಮೂರು ಬೋಗಿಗಳು ಇಲ್ಲಿಗೆ ಸಮೀಪದ ಕಣಿವೆಹಳ್ಳಿ ಬಳಿ ಹಳಿ ತಪ್ಪಿತ್ತು. ಕಡೂರು- ಚಿಕ್ಕಮಗಳೂರು ನೂತನ ರೇಲ್ವೆ ಮಾರ್ಗದ ಹಳಿ ಹಾಕುವ ಕೆಲಸ ಹಾಗೂ ರೇಲ್ವೆ ನಿಲ್ದಾಣ, ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಜನ ವಸತಿ ಪ್ರದೇಶಗಳ ಬಳಿ ಗೇಟ್ ನಿರ್ಮಾಣ ಮಾಡಬೇಕಾಗಿದೆ. ಈ ಕೆಲಸ ಪ್ರಗತಿಯಲ್ಲಿದೆ.
ರೇಲ್ವೆ ಹಳಿ ಹಾಕುವ ಕೆಲಸ ಪೂರ್ಣಗೊಂಡ ಬಳಿಕ ಕಡೂರಿನಿಂದ ಚಿಕ್ಕಮಗಳೂರಿಗೆ ಹಲವು ಬಾರಿ ಎಂಜಿನ್ ಬಂದು ಹೋಗಿದೆ. ಆ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆಯೂ ಆಗಿರಲಿಲ್ಲ. ಆದರೆ ಶನಿವಾರದಂದು ಅರಸೀಕೆರೆಯಿಂದ 12 ಬೋಗಿಗಳಲ್ಲಿ ಚಿಕ್ಕಮಗಳೂರಿಗೆ ಜಲ್ಲಿ ತರುತ್ತಿದ್ದಾಗ ಕಣಿವೆಹಳ್ಳಿ ಬಳಿ ಎಂಜಿನ್ ಸೇರಿದಂತೆ 3 ಬೋಗಿಗಳು ಹಳಿ ತಪ್ಪಿದ್ದವು. ಇದೇ ಪ್ರಥಮ ಬಾರಿಗೆ ಚಿಕ್ಕಮಗಳೂರು ನಗರಕ್ಕೆ 12 ಬೋಗಿಗಳಲ್ಲಿ ಸರಕು ಸಾಗಣೆ ಮಾಡಲಾಗುತ್ತಿತ್ತು. ಅದುದರಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.