ಅಡಕೆ ಬೆಳೆ ಹಾನಿ ಸಮೀಕ್ಷೆ
ಬಾಳೆಹೊನ್ನೂರು: ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಗೆ ತಗುಲಿರುವ ಕೊಳೆ ರೋಗ ಹಾಗೂ ಇತರೆ ತೋಟಗಾರಿಕೆ ಬೆಳೆಗಳ ಹಾನಿ ಸಮೀಕ್ಷೆಯನ್ನು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪರಶಿವಮೂರ್ತಿ ಅವರನ್ನು ಒಳಗೊಂಡ ತಂಡ ಶನಿವಾರ ನಡೆಸಿತು.
ಕಾನ್ಕೆರೆಯ ಸುಧಾಕರ್ ಅವರ ಕೊಳೆ ರೋಗ ಪೀಡಿತ ಅಡಕೆ ತೋಟಕ್ಕೆ ಭೇಟಿ ನೀಡಿದ್ದ ತಂಡ ಅಡಕೆ ಹಾಗೂ ಇತರೆ ಬೆಳೆಗಳಿಗೆ ಆಗಿರುವ ಹಾನಿಯನ್ನು ಪರಿಶೀಲಿಸಿತು.
ಭರವಸೆ: ಪರಶಿವಮೂರ್ತಿ ಈ ಕುರಿತು ಪ್ರತಿಕ್ರಿಯಿಸಿ ಶೃಂಗೇರಿ ಕ್ಷೇತ್ರಾದ್ಯಂತ ಶೇ. 40ಕ್ಕೂ ಹೆಚ್ಚು ಬೆಳೆ ಹಾನಿಯಾದ ಬಗ್ಗೆ ವರದಿಯಾಗಿದ್ದು, ಇದನ್ನು ಸರ್ಕಾರಕ್ಕೆ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಮೀಕ್ಷಾ ತಂಡದಲ್ಲಿ ತರೀಕೆರೆ ವಿಭಾಗದ ಹಿರಿಯ ಸಹಾಯಕ ನಿರ್ದೇಶಕ ವೇದಮೂರ್ತಿ, ನರಸಿಂಹರಾಜಪುರ ತಾಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸೀಮಾ, ಕೊಪ್ಪ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕಿ ರೇಖಾ ಇದ್ದರು.
ಬಾಳೆಹೊನ್ನೂರು ಪಿಎಸಿಎಸ್ ಅಧ್ಯಕ್ಷ ಕೆ.ಕೆ. ಸುಧಾಕರ್, ಹೋಬಳಿ ಬಿಜೆಪಿ ಅಧ್ಯಕ್ಷ ಕೆ.ಕೆ. ವೆಂಕಟೇಶ್, ಕೆ.ಕೆ. ಕಿರಣ್, ಊರುಗೊಡಿಗೆ ರಾಜಪ್ಪಗೌಡ ಅವರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅಧಿಕಾರಿಗಳ ತಂಡ ನಂತರ ಸಮೀಪದ ಸೀಗೋಡು, ಜಯಪುರ ಭಾಗಗಳಲ್ಲಿ ಸಮೀಕ್ಷೆ ನಡೆಸಿತು.