ಸಮಾಜದ ಸ್ವಾಸ್ಥ್ಯ ಕಾಪಾಡಲು ಶ್ರಮಿಸಿ
ಚಿಕ್ಕಮಗಳೂರು: ಸ್ವತಂತ್ರ ಭಾರತದಲ್ಲಿ ಮಹಿಳೆಯರ ಗೌರವ ಕಾಪಾಡುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ಕಡೆಗೆ ಭಾವಿ ವಕೀಲರುಗಳಾದ ಕಾನೂನು ವಿದ್ಯಾರ್ಥಿಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಸವರಾಜ್ ಎ.ಪಾಟೀಲ್ ಹೇಳಿದ್ದಾರೆ.
ನಗರದ ಎಂ.ಕೆ.ಎಸ್. ಕಾನೂನು ಕಾಲೇಜು ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಆಯೋಜಿಸಿದ್ದ ವಿಶೇಷ ಕಾನೂನು ಅರಿವು- ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸ್ವತಂತ್ರ್ಯ ದೊರಕಿಸಿಕೊಟ್ಟ ಮಹನೀಯರಿಗೆ ಗೌರವ ಸೂಚಿಸಬೇಕಾದ್ದು ನಮ್ಮೆಲ್ಲರ ಮೊದಲ ಕರ್ತವ್ಯವಾಗಬೇಕಿದೆ ಎಂದರು.
ದುಡಿಯುವ ಮಹಿಳೆಯ ಹಕ್ಕುಗಳು ಎಂಬ ವಿಷಯದ ಕುರಿತು ಮಾತನಾಡಿದ ನ್ಯಾಯಾಧೀಶರು, ದುಡಿಯುವ ಮಹಿಳೆಯರಿಗೆ ಕೆಲಸ ನಿರ್ವಹಿಸುವ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಹೊಣೆಗಾರಿಕೆ ಇದ್ದು, ಮಹಿಳೆಯರು ತಮ್ಮ ಹಕ್ಕುಗಳನ್ನು ಕೇಳಿ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಬಿ. ಕೇಶವರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾ.ಎಂ. ಮಹದೇವಯ್ಯ, ಅಫ್ತಾಬ್ ಅಹಮದ್, ಐ.ಎಸ್. ತೇಜಸ್ವಿ, ಕಾಲೇಜಿನ ಉಪ ಪ್ರಾಂಶುಪಾಲ ದೀಕ್ಷಿತ್ ಇದ್ದರು.