ಸೈನ್ಯದಲ್ಲಿ ಸೇವೆ ಸಲ್ಲಿಸಿದವರಿಗೆ ಚುನಾವಣೆ ಟಿಕೆಟ್ ನೀಡಿ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಆ.18
ಕನಿಷ್ಠ ಐದು ವರ್ಷ ಸೈನ್ಯದಲ್ಲಿ ಸೇವೆ ಮಾಡಿದವರಿಗೆ ಮಾತ್ರ ಚುನಾವಣೆಗಳಲ್ಲಿ ಟಿಕೆಟ್ ನೀಡಿದರೆ ದೇಶ ಸುಧಾರಣೆಯಾಗಬಹುದೆಂದು ಸಿರಿಗೆರೆ ತರಳಬಾಳು ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಸಖರಾಯಪಟ್ಟಣ ಹೋಬಳಿ ಚಟ್ನಳ್ಳಿ ಗ್ರಾಮದಲ್ಲಿ ಶರಣ ಸಿ. ಬಸವರಾಜು ಅವರ ಪ್ರಥಮ ಪುಣ್ಯಾರಾಧನೆಯ ಅಂಗವಾಗಿ ಅವರ ಕುಟುಂಬವರ್ಗ ಊರಿನ ಜನರಿಗಾಗಿ ಸಿದ್ಧಪಡಿಸಿರುವ ಬಸವಸಿದ್ದು ಶುದ್ಧನೀರಿನ ಘಟಕ ಉದ್ಘಾಟಿಸಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಸಿ.ಎಸ್. ಷಡಾಕ್ಷರಯ್ಯ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ದೇಶಭಕ್ತಿ, ಸಮಾಜ ಪ್ರೀತಿ ಮನದಾಳದಿಂದ ಬರಬೇಕು. ಇಂದಿನ ರಾಜಕಾರಣಿಗಳು ಉದ್ದುದ ಸುಂದರ ಭಾಷಣ ಮಾಡಬಹುದು. ಆದರೆ, ನಿಜವಾದ ಆಶಯ ಯೋಧರಲ್ಲಿ ಕಾಣುತ್ತೇವೆ. ಯೋಧರಿಗೆ ಅವಕಾಶ ಸಿಕ್ಕರೆ ಸುಧಾರಣೆಯಾಗಬಹುದೆಂದ ಸ್ವಾಮೀಜಿ, ಪ್ರತಿ ಜೀವಿಗೂ ಮೃತ್ಯು ಪ್ರಜ್ಞೆ ಇರುತ್ತದೆ. ಇನ್ನೊಬ್ಬರ ರಕ್ತಹೀರಿ ಬದುಕುವ ತಿಗಣೆಯಂತೆ ಮನುಷ್ಯ ಬಾಳಬೇಕೆ ಎಂಬುದನ್ನು ನಾವು ನಿರ್ಧರಿಸಬೇಕು. ಮೃತ್ಯುವಿನ ನಂತರದ ಬದುಕು ಕುರಿತಂತೆ ಮನುಷ್ಯನ ಚಿಂತನೆ ಪ್ರಾಣಿಗಳಿಗಿರುವುದಿಲ್ಲ. ಮೃತ್ಯು ಭಯ ಮೆಟ್ಟಿನಿಲ್ಲುವ ಎದೆಗಾರಿಕೆ ಯೋಧರಲ್ಲಿ ಕಾಣಲು ಸಾಧ್ಯ ಎಂದರು.
ಹಳ್ಳಿಗಳೇ ಪ್ರೇರಣೆ: ಬಹುತೇಕ ಸಾಹಿತಿ ಕಲಾವಿದರಿಗೆ ಹಳ್ಳಿಗಳೆ ಪ್ರೇರಣೆ. ಬಹುಪಾಲು ಜನರು ಗ್ರಾಮೀಣ ಪರಿಸರದಿಂದಲೇ ಬಂದವರು. ನಂತರ ನಗರದಲ್ಲಿ ನೆಲೆಸುತ್ತಾರೆ. ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಿ ಮಣ್ಣಿನ ಋಣ ತೀರಿಸಬೇಕೆಂಬ ಆಶಯ ಕೆಲವರಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಹೇಳಿದರು.
ಅನೇಕ ಹಳ್ಳಿಗಳಲ್ಲಿ ಶುದ್ಧನೀರು ಲಭ್ಯವಾಗುತ್ತಿಲ್ಲ. ವಿವಿಧ ಕಾರಣಗಳಿಗಾಗಿ ಸರ್ಕಾರದ ವತಿಯಿಂದ ಶುದ್ಧ ನೀರು ಪೂರೈಕೆ ಘಟಕ ಸ್ಥಾಪನೆಗೆ ನೆರವು ಸಿಗುತ್ತಿಲ್ಲ. ಚಟ್ನಳ್ಳಿ ಮಹೇಶ್ ತಂದೆ- ತಾಯಿಯರ ಹೆಸರಿನಲ್ಲಿ ಶುದ್ಧ ಕುಡಿಯುವ ನೀರು ಘಟಕ ಊರಿನಲ್ಲಿ ಸೇವಾದೃಷ್ಟಿಯಿಂದ ಸ್ಥಾಪಿಸಿರುವುದು ಅನುಕರಣೀಯ. ಈ ರೀತಿ ಯೋಜನೆಗಳು ವ್ಯಾಪಕವಾಗಬೇಕು ಎಂದರು.
ಜನರಿಗೆ ಷರತ್ತು: ದೇವಸ್ಥಾನ ನಿರ್ಮಾಣಕ್ಕಾಗಿ ಬಹಳಷ್ಟು ಹಣ ಜನ ವ್ಯಯಿಸುತ್ತಾರೆ. ದೇವರಿಗೆ ಗುಡಿಬೇಕಿಲ್ಲ ಬೇಕಿರುವುದು ಜನರಿಗೆ. ಇನ್ನು ಮುಂದೆ ದೇವಸ್ಥಾನದ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿದವರಿಗೆ ಶುದ್ಧ ನೀರಿನ ಘಟಕ ಊರಿನಲ್ಲಿ ಪ್ರಾರಂಭಿಸಬೇಕೆಂಬ ಷರತ್ತನ್ನು ವಿಧಿಸುವುದಾಗಿ ಸ್ವಾಮೀಜಿ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಸ. ಗಿರಿಜಾಶಂಕರ್ ಉಪನ್ಯಾಸ ನೀಡಿ, ಮನುಷ್ಯನ ಹುಟ್ಟಿನ ಜೊತೆಗೆ ಸಾವಿನ ಪಯಣವೂ ಆರಂಭವಾಗುತ್ತದೆ. ಸಾವಿನ ಭಯ ಮನುಷ್ಯನಾಗಿ ಬದುಕಲು ಪ್ರೇರೇಪಿಸುತ್ತದೆ. ಸಮಾಜಮುಖಿಯಾಗಿ ಬದುಕಿದ ಬಸವರಾಜಪ್ಪ, ಮಕ್ಕಳನ್ನೂ ಅದೇ ನಿಟ್ಟಿನಲ್ಲಿ ಬೆಳೆಸಿದ ಪರಿಣಾಮ ಚಟ್ನಳ್ಳಿಯಲ್ಲಿ ಅನೇಕ ಸಮಾಜಮುಖಿ ಸೇವಾ ಕಾರ್ಯಗಳು ನಡೆಯುತ್ತಿವೆ ಎಂದರು.
ಸಂಸ್ಕಾರ ಬೆಳೆಯುತ್ತದೆ: ಕನ್ನಡ ಸಾಹಿತ್ಯ ಪೂಜಾರಿ ಹಿರೇಮಗಳೂರು ಕಣ್ಣನ್ ಪ್ರಧಾನ ಉಪನ್ಯಾಸ ನೀಡಿ, ಮನೆಯಲ್ಲಿ ಉತ್ತಮ ಸಂಸ್ಕಾರ ನೀಡುವುದರಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ. ಒಳ್ಳೆಯ ಆದರ್ಶಗಳನ್ನು ಮಕ್ಕಳಿಗೆ ನೀಡಿದ್ದೇ ಆದರೆ ಆರೋಗ್ಯಪೂರ್ಣ ವಾತಾವರಣ ಸೃಷ್ಟಿಯಾಗಬಹುದೆಂಬುದಕ್ಕೆ ಇಂದಿನ ಸಂಗೀತ ಸೇವಾ ವೈಚಾರಿಕ ಕಾರ್ಯಕ್ರಮವೇ ಸಾಕ್ಷಿ ಎಂದು ಹೇಳಿದರು.
ಸನ್ಮಾನಕ್ಕೆ ಭಾಜನರಾದ ವೀರಯೋಧ ಸಿ.ಎಸ್. ಷಡಾಕ್ಷರಯ್ಯ, ಜಿ.ಪಂ. ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಮಾಜಿ ಶಾಸಕ ಡಾ. ವೈ.ಸಿ. ವಿಶ್ವನಾಥ್ ಮಾತನಾಡಿದರು.
ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಎ.ಆರ್. ರಾಜಶೇಖರ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ನಿರಂಜನ್, ಎ.ಸಿ. ಚಂದ್ರಪ್ಪ, ಪಲ್ಲವಿ ಸಿ.ಟಿ. ರವಿ, ಲಲಿತಮ್ಮ ಶ್ರೀಕಂಠಪ್ಪ, ಶೇಖರಪ್ಪ, ಕಲ್ಯಾಣಕುಮಾರ್, ಬಸವರಾಜು, ಕಲ್ಮರುಡಪ್ಪ, ಗೌರಮ್ಮ ಬಸವೇಗೌಡ ಪಾಲ್ಗೊಂಡಿದ್ದರು. ಸಾಹಿತಿ ಚಟ್ನಳ್ಳಿ ಮಹೇಶ್, ಸಿದ್ದಮ್ಮ ಬಸವರಾಜು, ತೇಜು, ಪಂಕಜಾ ಕುಮಾರ್, ಚಂದ್ರಮ್ಮ ಇದ್ದರು.