ಉತ್ತಮ ಫಸಲು ನಿರೀಕ್ಷೆಲ್ಲಿ ಮೆಕ್ಕೆ ಜೋಳ, ಸೂರ್ಯಕಾಂತಿ ರೈತ
ಕಡೂರು: ತಾಲೂಕಿನಾದ್ಯಂತ ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಬೆಳೆ ಉತ್ತಮವಾಗಿ ಬಂದಿದ್ದು ರೈತರಿಗೆ ಉತ್ತಮ ಫಸಲು ಬರುವ ನಿರೀಕ್ಷೆಯಿದೆ ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಶಿವಣ್ಣ ಹೇಳಿದರು.
ತಾಲೂಕಿನ ಎಂಟು ಹೋಬಳಿಗಳಿಂದ ಸುಮಾರು 14,350 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಉತ್ತಮವಾಗಿ ಬಂದಿದೆ. ಹಿರೇನಲ್ಲೂರು ಹೋಬಳಿಯ ಕೆಲವೆಡೆ ಎಲೆ ಚಕ್ಕೆ ರೋಗ ಬಂದಿದೆ. ಆದರೆ ಬೆಳೆ ಕೈಗೆ ಬಂದಿರುವ ಸಮಯದಲ್ಲಿ ಇದಕ್ಕೆ ಯಾವುದೇ ಚಿಕಿತ್ಸೆ ನೀಡಲು ಬರುವುದಿಲ್ಲ. ರೋಗ ನಿಯಂತ್ರಣಕ್ಕಾಗಿ ಹಿಂದೆಯೇ ಕೃಷಿ ಇಲಾಖೆಯಿಂದ ಎಲ್ಲ ಹೋಬಳಿಗಳ ಕೃಷಿ ಸಹಾಯಕ ಅಧಿಕಾರಿಗಳಿಂದ ಮಾರ್ಗದರ್ಶನ ಮಾಡಿಸುವ ಮೂಲಕ ರೈತರು ಬೆಳೆ ಮಾಡಿದ್ದಾರೆ. ಇನ್ನು 3,500 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆ ಬೆಳೆಯುವ ಮೂಲಕ ಎಲ್ಲೆಡೆ ಉತ್ತಮ ಬೆಳೆ ಬಂದಿದೆ. ತಾಲೂಕಿನ ಯಗಟಿ, ಕಸಬಾ, ಹಿರೇನಲ್ಲೂರು ಮತ್ತು ಸಿಂಗಟಗೆರೆ ಹೋಬಳಿಯಲ್ಲಿ ರಾಗಿ ಬೆಳೆಗೆ ತೇವಾಂಶ ಕಡಿಮೆಯಿರುವುದರಿಂದ ಸ್ವಲ್ಪಮಟ್ಟಿಗೆ ಬೆಳೆ ಕುಂಠಿವಾಗಿದೆ. ಕೆಲ ದಿನಗಳಿಂದ ಬರುತ್ತಿದ್ದ ಮಳೆ ನಿಂತಿರುವುದರಿಂದ ತೇವಾಂಶದ ಕೊರತೆಯಿಂದಾಗಿ ರಾಗಿ ಬೆಳೆ ಸ್ವಲ್ಲ ಮಟ್ಟಿಗೆ ಕುಂಠಿತವಾಗಿದೆ. ಉಳಿದಂತೆ ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಉತ್ತಮ ಫಸಲು ಬರಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.