ಹೋದಿರಾಯನ ಹಳ್ಳದಿಂದ ನೀರು: ಶಾಸಕ ಶ್ರೀನಿವಾಸ್
ತರೀಕೆರೆ: ತಾಲೂಕಿನ ಜಂಬದಹಳ್ಳಕ್ಕೆ ಹೋದಿರಾಯನ ಹಳ್ಳದಿಂದ ನೀರು ತರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದ್ದಾರೆ.
ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ ಆರೋಪಕ್ಕೆ ತಿರುಗೇಟು ನೀಡಿ ಹೊಸದಾಗಿ ನಾಲೆಯ ಕಾಮಾಗಾರಿ ಪ್ರಾರಂಭ ಮಾಡುವ ಮುನ್ನ ಮಾಡುವ ಸಾಮಾನ್ಯ ಸರ್ವೆ ಕಾರ್ಯವಾಗಿರುತ್ತದಯಷ್ಟೆ, ಕರ್ನಾಟಕ ನೀರಾವರಿ ನಿಗಮ 23-07-2013 ರಂದು ಹೋದಿರಾಯನ ಹಳ್ಳ ಟೆಂಡರ್ ಪ್ರಕಟಣೆ (ನಂ.4,2013-14ರ) ನೀಡಿದ್ದು ಅದರಂತೆ ಹೋದಿರಾಯನ ಹಳ್ಳ ಪಥ ಬದಲಾವಣೆ ಕಾಮಗಾರಿ ಟೆಂಡರ್ ಕರೆದಿದ್ದು ಕೆಲವೇ ತಿಂಗಳಲ್ಲಿ ಈ ಕಾಮಗಾರಿ ಪ್ರಾರಂಭವಾಗಲಿದೆ. ಜಂಬದಹಳ್ಳಕ್ಕೆ ಹೋದಿರಾಯನ ಹಳ್ಳದಿಂದ ನೀರನ್ನು ತರುವುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗೂ ಸುಳ್ಳು ಹೇಳಿಕೊಂಡು ಜನರ ದಿಕ್ಕು ತಪ್ಪಿಸುವುದನ್ನು ಅವರೇ ಮಾಡಿಕೊಂಡು ಬರುತ್ತಿದ್ದು ತಾಲೂಕಿನ ಜನತೆಯೇ ಇದಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಸದ ಜಯಪ್ರಕಾಶ್ ಹೆಗಡೆಯವರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು ಹಿಂದಿನ ಸಂಸದರು ಪ್ರದೇಶಾಭಿವೃದ್ಧಿ ಯೋಜನೆಯಡಿ ಕೈಗೊಂಡಿದ್ದ ಕಾಮಗಾರಿಗಳಿಗೆ, ಕಾಮಗಾರಿ ಪೂರ್ಣಗೊಂಡಿದ್ದರ ಕುರಿತು ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದ ಕಾರಣ ಜಯಪ್ರಕಾಶ್ ಹೆಗಡೆಯವರಿಗೆ 2012-13ನೇ ಸಾಲಿನ ಸಂಸದರ ಅನುದಾನ ಬಿಡುಗಡೆಯಾಗುವುದರಲ್ಲಿ ತಡವಾಯಿತು. ಸಂಸದರು ತಮ್ಮ ಪ್ರದೇಶಾಭಿವೃದ್ಧಿ ಅನುದಾನವನ್ನು ಸಮವಾಗಿ ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳಿಗೆ ಹಂಚಿಕೆ ಮಾಡಿದ್ದು ಕಾಂಗ್ರೆಸ್ ನಾಯಕರು ಹಾಗೂ ಬ್ಲಾಕ್ ಅಧ್ಯಕ್ಷರಿಗೆ, ತಮ್ಮ ವ್ಯಾಪ್ತಿಯಲ್ಲಿ ಜನರಿಗೆ ಅವಶ್ಯಕತೆಯಿರುವ ಕಾಮಗಾರಿಗಳನ್ನು ಮಾಡಿಸುತ್ತಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಹೆದ್ದಾರಿ ಇಲಾಖೆಗೆ ಸಂಬಂದಪಟ್ಟಿದ್ದು ಸಂಸದರ ಅನುದಾನದಲ್ಲಿ ಕೈಗೊಳ್ಳಲು ಸಾಧ್ಯವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ತರೀಕೆರೆ ಸರ್ಕಾರಿ ಪ್ರ.ಕಾಲೇಜಿಗೆ ಸ್ವಂತ ಕಟ್ಟಡವಿಲ್ಲದೆ ಅರಣ್ಯ ಇಲಾಖೆಯವರ ತಕರಾರಿನಿಂದ, ಮಂಜೂರಾಗಿರುವ ಹೊಸ ಕಟ್ಟಡದ ಕಾಮಗಾರಿ ವಿಳಂಬವಾಗಿದ್ದು ಅದನ್ನು ಬಗೆಹರಿಸುವ ಎಲ್ಲಾ ಪ್ರಯತ್ನಗಳನ್ನು ಈಗಾಗಲೇ ಮಾಡಿದ್ದು ಕೆಲವೇ ದಿನಗಳಲ್ಲಿ ಕಾಲೇಜು ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದೆ. ಯಾವುದೇ ಸರ್ಕಾರಿ ಕಟ್ಟಡವಿಲ್ಲದಿರುವ ಕಾರಣ ಅನಿವಾರ್ಯವಾಗಿ ಸರ್ಕಾರದ ನಿಯಮಾನುಸಾರ ಖಾಸಗಿ ಕಟ್ಟಡವನ್ನು ತಾತ್ಕಾಲಿಕ ವ್ಯವಸ್ಥೆ ಮಾಡಲು ಬಾಡಿಗೆ ಪಡೆಯಲು ಯೋಚಿಸಲಾಗುತ್ತಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.