ಜೀವನ ವಿಕಾಸಕ್ಕೆ ಆದರ್ಶ ಮುಖ್ಯ: ಶ್ರೀ
ಬಾಳೆಹೊನ್ನೂರು: ಮಾನವ ಜೀವನ ವಿಕಾಸಗೊಳ್ಳಲು ಆದರ್ಶ ವಿಚಾರಗಳು ಮುಖ್ಯ. ಬಾಳಿನ ಬನ ಪಲ್ಲವಿಸಲು ಯತಾರ್ಥ ಜ್ಞಾನ ಅವಶ್ಯಕ. ಅಂತರಂಗ ಮತ್ತು ಬಹಿರಂಗ ಶುದ್ಧಿಗೊಂಡಾಗ ಜೀವನ ಸಾರ್ಥಕವಾಗುತ್ತದೆ. ಜ್ಞಾನವೇ ಬಾಳಿನ ಬೆಳಕು ಎಂಬುದನ್ನು ಯಾರೂ ಮರೆಯಬಾರದೆಂದು ರಂಭಾಪುರೀ ಜಗದ್ಗುರು ಶ್ರೀ ವೀರಸೋಮೇಶ್ವರ ಶಿವಾಚಾರ್ಯರು ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ರಂಭಾಪುರೀ ಪೀಠದಲ್ಲಿ ಶ್ರಾವಣ ಧರ್ಮ ಸಮಾರಂಭ ಮತ್ತು ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಪ್ರಸಾರಾಂಗದಿಂದ ಆಯೋಜಿಸಿದ್ದ ಶ್ರಾವಣ ವಿಶೇಷ ಉಪನ್ಯಾಸ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಧರ್ಮದ ಹೂದೋಟದಲ್ಲಿ ಹೋದ ಮನುಷ್ಯ ಜೀವನದಲ್ಲಿ ಪರಿವರ್ತನೆಗೊಳ್ಳಬೇಕು. ಆತನ ಮನಸ್ಸು ಮತ್ತು ಭಾವನೆಗಳು ಪರಿಶುದ್ಧಗೊಳ್ಳಬೇಕು. ಬದುಕೊಂದು ಪುಸ್ತಕವಾಗಿದ್ದು, ಪ್ರತಿ ಪುಟದಿಂದ ಏನನ್ನಾದರೂ ಕಲಿಯಬಹುದು. ಇಲ್ಲವೇ ಸುಮ್ಮನೆ ಪುಟ ತಿರುವಲೂಬಹುದು. ವಿವೇಚನೆ ಮತ್ತು ಜವಾಬ್ದಾರಿಯಿಂದ ಮನುಷ್ಯ ಮುನ್ನಡೆಯಬೇಕು ಎಂದರು.
ಕಷ್ಟವನ್ನು ಎದುರಿಸಿ: ನಾಣ್ಯದಂತಿರುವ ಮಾನವ ಜೀವನ, ಸುಖ ದುಃಖಗಳು ಅದರ ಮುಖಗಳು. ಸುಖದ ನಂತರ ಕಷ್ಟ, ಕಷ್ಟದ ನಂತರ ಸುಖದ ಚಕ್ರ ತಿರುಗುತ್ತಲೇ ಇರುತ್ತದೆ. ನೀರಿನ ಹರಿವಿನಗುಂಟ ಹರಿದು ಹೋಗುವ ಮೃತ ಮೀನುಗಳು ನಾವಾಗಬಾರದು. ಪ್ರವಾಹದ ವಿರುದ್ಧ ಈಜುವುದು ಜೀವಂತ ಮೀನುಗಳಿಗೆ ಮಾತ್ರ ಸಾಧ್ಯ. ಎಷ್ಟೇ ಕಷ್ಟ ಬಂದರೂ ಎದುರಿಸಿ ಜಯಶೀಲರಾದಾಗ ಬದುಕಿಗೆ ನಿಜವಾದ ಬೆಲೆ ಪ್ರಾಪ್ತವಾಗುತ್ತದೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಗುಳೇದಗುಡ್ಡ ಮರಡಿಮಠದ ಕಾಡಸಿದ್ಧೇಶ್ವರ ಶಿವಾಚಾರ್ಯರು, ನಿಜವಾದ ಅರಿವು ಮತ್ತು ಆಧ್ಯಾತ್ಮ ಬೋಧಿಸುವಾತನೇ ಶ್ರೀಗುರು ಎಂದರು.
ಆದರ್ಶ ಪಾಲಿಸಿ: ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡಿದ ಹಲಗೂರು ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಮನುಷ್ಯ ಜೀವನದಲ್ಲಿ ಪುರುಷಾರ್ಥ ಸಂಪಾದನೆಗಾಗಿ ಶ್ರಮಿಸಬೇಕು. ಹಿರಿಯರ ಅನುಭವದ ಆದರ್ಶಗಳನ್ನು ಪರಿಪಾಲಿಸಿಕೊಂಡು ಬರಬೇಕೆಂದು ಎಂದು ನುಡಿದರು.
ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ದೊಡ್ಡಸಗರದ ಶ್ರೀ ಸೋಮೇಶ್ವರ ಶಿವಾಚಾರ್ಯರು, ಹರಪನಹಳ್ಳಿ ಮಠದ ಪ್ರಮೋದ ಸ್ವಾಮೀಜಿ, ಆಲಮೇಲ ಶ್ರೀಗಳು ಪಾಲ್ಗೊಂಡಿದ್ದರು.