ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತಾಕತ್ತಿದ್ದರೆ ಅಕ್ರಮ ಗಣಿಗಾರಿಕೆ ಸಿಬಿಐಗೆ ವಹಿಸಿ

Rashmi Kasaragodu
Updated On : 21 Aug 2013, 11:55 am

ಕಡೂರು: ತಾಕತ್ತಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿಕೊಡಲಿ ಎಂದು ಮಾಜಿ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ಅವರು ಕಡೂರು ಪಟ್ಟಣದಲ್ಲಿ ಕೆಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನೀಡಿದ ಅಭಿನಂದನೆ ಸ್ವೀಕರಿಸಿ ಕೆಜೆಪಿ ಮುಖಂಡ ಬೆಳ್ಳಿ ಪ್ರಕಾಶ್ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪ್ರಥಮ ಪ್ರಯತ್ನ: ನಾನು ಮುಖ್ಯಮಂತ್ರಿಯಾದಾಗ ಪ್ರಥಮ ಬಾರಿಗೆ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಪ್ರಯತ್ನಿಸಿದ್ದು, ಬೇರೆ ದೇಶಗಳು ನಾವು ಕಳುಹಿಸುವ ಅದಿರಿನಿಂದ ವಸ್ತುಗಳನ್ನು ತಯಾರಿಸಿ, ತಮ್ಮ ದೇಶದ ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಳ್ಳುತ್ತಿದ್ದರು. ತಾವು ಇದನ್ನು ತಡೆಗಟ್ಟಲು ಮುಂದಾಗಿ ಗಣಿ ಅಕ್ರವನ್ನು ಸಿಬಿಐಗೆ ನೀಡುವ ಪ್ರಯತ್ನ ಮಾಡಿದ್ದಾಗಿ ತಿಳಿಸಿದರು.
ಆದರೆ, ಇಂದು ಅಕ್ರಮ ಗಣಿಗಾರಿಕೆ ಮಾಡುತ್ತಿರುವವರು ರಾಜರೋಷವಾಗಿ ಇದ್ದಾರೆ. ಅಂದು ಇದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐಗೆ ವಹಿಸುವುದಾಗಿ ಹೇಳಿದ್ದರು. ಈಗ ತಮ್ಮದೇ ಕಾಂಗ್ರೆಸ್ ನೇತೃತ್ವದ  ಸರ್ಕಾರವಿದ್ದು, ಅವರಿಗೆ ತಾಕತ್ತಿದ್ದರೆ ಅಕ್ರಮ ಗಣಿಗಾರಿಕೆ ಪ್ರಕರಣ  ಸಿಬಿಐಗೆ ವಹಿಸಲಿ ಎಂದು ಸವಾಲು ಹಾಕಿದರು.
ವರ್ಗಾವಮೆಯೇ ಸಾಧನೆ: ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ 100 ದಿನ ಪೂರೈಸಿದೆ. ಆದರೆ, ಈ ಸರ್ಕಾರದ ಸಾಧನೆ ಎಂದರೆ ವರ್ಗಾವಣೆಯಲ್ಲಿ ತೊಡಗಿರುವುದು ಮತ್ತು ಸೇಡಿನ ರಾಜಕಾರಣ ಮಾತ್ರ ಆಗಿದೆ ಎಂದವರು ಹೇಳಿದರು.
ಅವಸರದಲ್ಲಿ ಕೈಗೊಂಡ ಕಾರ್ಯಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಾದರೂ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿಲ್ಲ. ಲೋಕೋಪಯೋಗಿ ಮತ್ತಿತರ ಇಲಾಖೆ  ಬಿಲ್ಲುಗಳು ಪಾವತಿಯಾಗಿಲ್ಲ. ಪೌಡರ್ ಹಾಲಿನ ವಿತರಣೆಯಲ್ಲಿ ಗೊಂದಲ ಉಂಟಾಗಿದೆ ಎಂದರು.
ತಾವು ಅಧಿಕಾರ ಮುಗಿಸಿದಾಗ ರಾಜ್ಯದ ಬೊಕ್ಕಸ ತುಂಬಿತ್ತು. ರೆವಿನ್ಯೂ ಮತ್ತು ತೆರಿಗೆ ಹೆಚ್ಚಿಸಿ ಜನರ ಮೇಲೆ ಹೊರೆ ಹೊರಿಸಲಾಗಿದೆ. 15-20 ವರ್ಷದಿಂದ ಮಕ್ಕಳಂತೆ ಸಾಕಿದ್ದ ಅಡಕೆ, ತೆಂಗಿನ ಮರಗಳು ನಾಶವಾಗುವ ಹಂತ ತಲುಪಿ ರೈತರು ಸಂಕಷ್ಟದಲ್ಲಿದ್ದಾರೆ. ಈ ರೈತರಿಗೆ ಪರಿಹಾರ ಕೂಡ ನೀಡುತ್ತಿಲ್ಲ. ಕೆಲವೆಡೆ ರೈತರು ಬಿತ್ತನೆ ಮಾಡಿದ್ದರೂ, ಬೆಳೆ ಕೈಗೆ ಸಿಗದ ಸ್ಥಿತಿ ಉಂಟಾಗಿರುವ ರೈತರ ಸ್ಥಿತಿ ಏನು ಎಂದು ಕಾಂಗ್ರೆಸ್ ಸರ್ಕಾರ ಚಿಂತಿಸುತ್ತಿಲ್ಲ ಎಂದು ಆರೋಪಿಸಿದರು.
ಜನರ ಕಷ್ಟಕ್ಕೆ ಸ್ಪಂದನೆ: ತಾವು ಮುಖ್ಯಮಂತ್ರಿಯಾದಾಗ ಎಲ್ಲಾ ಮಂತ್ರಿಗಳು ಶಾಸಕರು ರಾಜ್ಯ ಸುತ್ತುವ ಕೆಲಸ ಮಾಡುತ್ತಾ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದರು. ಈ ಸರ್ಕಾರದ ಯಾವುದೇ ಮಂತ್ರಿ ಮಹೋದಯರೂ ಹೊರಗೇ ಬರುತ್ತಿಲ್ಲ ಎಂದರೆ ಪ್ರಜಾಪ್ರಭುತ್ವದ ಸ್ಥಿತಿ ಎಲ್ಲಿಗೆ ಬಂದಿದೆ ಎಂಬುದನ್ನು ಪ್ರಶ್ನಿಸಬೇಕಿದೆ ಎಂದವರು ಹೇಳಿದರು.
ಶಾಸಕರಿಗೆ ರು. 2 ಕೋಟಿ ಅನುದಾನ ನೀಡುವುದಾಗಿ ಹೇಳಿರುವ ಸಿದ್ದರಾಮಯ್ಯ, ರು. 1 ಕೋಟಿಯನ್ನೂ ಬಿಡುಗೆಡೆ ಮಾಡಿಲ್ಲ. ಇವರ ಯೋಗ್ಯತೆಗೆ ನಗರಸಭೆ ಪುರಸಭೆ ಚುನಾವಣೆ ನಡೆದು ಆರು ತಿಂಗಳಾಗಿದ್ದರೂ ಕೂಡ ಮೀಸಲಾತಿ ಪ್ರಕಟಿಸಲು ಆಗುತ್ತಿಲ್ಲ ಎಂದರೆ ರಾಜ್ಯದಲ್ಲಿ ಸರ್ಕಾರ ಇದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದರು.
ಕೊಬ್ಬರಿಗೆ ಬೆಂಬಲ ಬೆಲೆ: ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸಿ, ಕೆಲವೆಡೆ ಮಾತ್ರ ಖರೀದಿ ಮಾಡಿದ್ದು, ರೈತರ ಬೆಳೆಗೆ ಸರಿಯಾದ ಬೆಲೆ ಸಿಗುವಂತೆ ಮಾಡುತ್ತಿಲ್ಲ. ನಾವು ಕೊಬ್ಬರಿಗೆ ಬೆಂಬಲ ಬೆಲೆ ನೀಡಿದ್ದೆವು. ತಾವು ರೈತರಿಗೆ ಕೃಷಿ ಬಜೆಟ್ ಮಾಡುವ ಮೂಲಕ ಬಡ್ಡಿ ಇಲ್ಲದೆ ಸಾಲ ನೀಡಿದ ಪ್ರಥಮ ಸರ್ಕಾರ ನಮ್ಮದಾಗಿತ್ತು ಎಂದರು.
ಇವರು ಕೇಂದ್ರ ಸರ್ಕಾರದ ಮೂಗುದಾರ ಹಿಡಿದು ರಾಜ್ಯದ ರೈತರಿಗೆ ಸಾಲ ನೀಡಲಿ. ರು. 1 ಕ್ಕೆ ಅಕ್ಕಿ ಕೊಟ್ಟು ಜನರ ಜೇಬಿನಿಂದ ಬೇರೆ ರೂಪದಲ್ಲಿ ಹಣ ಕೀಳುವ ತಂತ್ರ ಮಾಡಲಾಗುತ್ತಿದೆ ಎಂದು ಯಡಿಯೂರಪ್ಪ  ಟೀಕಿಸಿದರು. ಈ ರಾಜ್ಯ ಸರ್ಕಾರದ ಆಡಳಿತದ ವೈಖರಿಯ ಕುರಿತು ತಾವು ಸದ್ಯಕ್ಕೆ ಏನನ್ನೂ ಹೇಳುವುದಿಲ್ಲ. ಸಮಯ ಬಂದಾಗ ಹೇಳುತ್ತೇನೆ ಎಂದರು.
 ಬೆಳ್ಳಿ ಪ್ರಕಾಶ್, ತಾಲೂಕು ಅಧ್ಯಕ್ಷ ಎಸ್.ವಿ. ಉಮಾಪತಿ, ಪಿ.ಕೆ. ರೇವಣ್ಣಯ್ಯ, ಬಾಬು, ಓಂಕಾರಪ್ಪ, ಸಂತೋಷ್, ದೇವರಾಜ್, ಪ್ರಸನ್ನ, ತಿಪ್ಪೇಶ್, ಮಹೇಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement